

ರಾಂಚಿ: ಬಹುಕೋಟಿ ಮೇವು ಹಗರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಸೇರಿ 15 ಆರೋಪಿಗಳು ತಪ್ಪಿತಸ್ಥರು ಎಂದು ರಾಂಚಿ ಸಿಬಿಐ ವಿಶೇಷ ಕೋರ್ಟ್ ಶನಿವಾರ ತೀರ್ಪು ನೀಡಿದೆ. ಆದರೆ ಲಾಲು ದೋಷಿಯಾಗಲು ರಾಜಕೀಯ ಪಿತೂರಿ ಕಾರಣ ಎಂದು ಆರ್ ಜೆಡಿ ಆರೋಪಿಸಿದೆ.
ಸಿಬಿಐ ಕೋರ್ಟ್ ತೀರ್ಪು ಪ್ರಕಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್ ಜೆಡಿ ನಾಯಕ ಮನೋಜ್ ಜಾ ಅವರು, ನನಗೆ ನ್ಯಾಯಾಂಗದಲ್ಲಿ ನಂಬಿಕೆ ಇದೆ. ಆದರೆ ಈ ಪ್ರಕರಣದಲ್ಲಿ ಹಾಗಾಗಿಲ್ಲ. ಪ್ರತಿಪಕ್ಷಗಳ ಬಾಯಿ ಮುಚ್ಚಿಸಲು ಮಾಡಿರುವ ರಾಜಕೀಯ ಪಿತೂರಿ ಎಂದು ಆರೋಪಿಸಿದ್ದಾರೆ.
ಒಂದೇ ಪ್ರಕರಣದಲ್ಲಿ ಒಬ್ಬರು ದೋಷಿ ಮತ್ತೊಬ್ಬರು ನಿರ್ದೋಷಿಯಾಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿರುವ ಜಾ, ಸಿಬಿಐ ವಿಶೇಷ ಕೋರ್ಟ್ ತೀರ್ಪು ಪ್ರಶ್ನಿಸಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇವೆ. ನಮಗೆ ಅಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.