ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧದ 22 ವರ್ಷ ಹಳೆಯ ಪ್ರಕರಣವೊಂದನ್ನು ಉತ್ತರ ಸರ್ಕಾರ ಬುಧವಾರ ಹಿಂಪಡೆದಿದೆ.
ಕ್ರಿಮಿನಲ್ ಅಪರಾಧ ಹೊಂದಿರುವ ಸಂಸದರು, ಶಾಸಕರ ತ್ವರಿತಗತಿ ವಿಚಾರಣೆಗಾಗಿ ವಿಶೇಷ ಕೋರ್ಟ್ ಗಳನ್ನು ಸ್ಥಾಪಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದ ಬೆನ್ನಲ್ಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಾವು ಒಳಗೊಂಡಂತೆ 13 ನಾಯಕರ ವಿರುದ್ಧದ ಪ್ರಕರಣಗಳನ್ನು ಕೈಬಿಟ್ಟಿದ್ದಾರೆ.
ಮೇ 27, 1995ರಲ್ಲಿ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಸಭೆ ನಡೆಸಿದ ಆರೋಪದ ಮೇಲೆ ಸಿಎಂ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವ ಶಿವ ಪ್ರತಾಪ್ ಶುಕ್ಲಾ, ಬಿಜೆಪಿ ಶಾಸಕ ಶೀತಲ್ ಪಾಂಡೆ ಹಾಗೂ ಇತರೆ 10 ಮಂದಿ ವಿರುದ್ಧ ಗೋರಖಪುರ್ ಪಿಪಿಗಂಜಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರವನ್ನು ಕೈಬಿಡಲಾಗಿದೆ.
ಕಳೆದ ವಾರ ಉತ್ತರ ಪ್ರದೇಶದಲ್ಲಿನ ವಿವಾದಿತ ಸಂಘಟಿತ ಅಪರಾಧ ನಿಗ್ರಹ ತಿದ್ದುಪಡಿ ಮಸೂದೆ(ಯುಪಿಸಿಓಸಿಬಿ) ಮಂಡಿಸುವ ಮುನ್ನ ಯೋಗಿ ವಿರುದ್ಧದ ಪ್ರಕರಣ ಕೈಬಿಡಲಾಗಿದೆ. ಪ್ರತಿಭಟನೆಗೆ ಸಂಬಂಧಿಸಿದಂತೆ ರಾಜಕೀಯ ಪ್ರೇರಿತವಾಗಿ ದಾಖಲಾದ 20 ಸಾವಿರ ಪ್ರಕರಣಗಳನ್ನು ಕೈಬಿಡುತ್ತಿರುವುದಾಗಿ ಯೋಗಿ ಆದಿತ್ಯನಾಥ್ ಸದನಕ್ಕೆ ತಿಳಿಸಿದ್ದರು.