ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ ಅವರ ರಾಜಕೀಯ ಪ್ರವೇಶ ಇದೀಗ ಬಿಸಿಬಿಸಿ ಚರ್ಚೆಗೆ ಕಾರಣವಾಗಿದ್ದು, ಯಾವಾಗ ಅವರು ರಾಜಕೀಯ ಪ್ರವೇಶಿಸುತ್ತಾರೆ ಎಂಬಲ್ಲಿಂದ ಹಿಡಿದು ರಜನಿಯವರು ಬಿಜೆಪಿಯ ಕಡೆಗೆ ಒಲವು ತೋರಿಸಿದರೆ ಎಂಬ ದಿಗಿಲು ಅವರ ಅನೇಕ ಅಭಿಮಾನಿಗಳಿಗೆ ಉಂಟಾಗಿದೆ.
ಮೊನ್ನೆ ಬುಧವಾರ ಚೆನ್ನೈನ ರಾಘವೇಂದ್ರ ಮಂಟಪದಲ್ಲಿ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡುವಾಗ ರಜಿನಿಕಾಂತ್ ಅವರು ಯಾವುದೇ ರಾಜಕೀಯ ಪಕ್ಷ ಸೇರಿಕೊಳ್ಳುವ ಇಂಗಿತ ವ್ಯಕ್ತಪಡಿಸಿರಲಿಲ್ಲ. ಆದರೂ ಅವರು ಹೊರಹಾಕಲಿರುವ ರಾಜಕೀಯ ನಿರ್ಧಾರ ಕೋಣೆಯೊಳಗಿರುವ ಆನೆಯಂತಾಗಿದೆ.
ಬಿಜೆಪಿ ಸೇರುವ ಬಗ್ಗೆ ತಲೈವಾರ್ ಏನೂ ಹೇಳಿಲ್ಲ. ಅವರು ಬಿಜೆಪಿ ಸೇರಿದರೆ ಕ್ರಿಸ್ತಿಯನ್ನರು ಮತ್ತು ಮುಸಲ್ಮಾನರ ಮತಗಳನ್ನು ಕಳೆದುಕೊಳ್ಳುವುದು ಖಂಡಿತ ಎಂದು ರಜಿನಿಕಾಂತ್ ರಸಿಗರ್ ನರ್ಪಾನಿ ಮಂದ್ರಮ್ ನ ಅಧ್ಯಕ್ಷ ವಿ.ಸೂರ್ಯ ಹೇಳುತ್ತಾರೆ. ತಮ್ಮ ಸೂಪರ್ ಸ್ಟಾರ್ ತಮ್ಮದೇ ಸ್ವಂತ ಪಕ್ಷ ರಚಿಸಬಹುದು ಎಂಬ ಲೆಕ್ಕಾಚಾರ ಇನ್ನೊಂದೆಡೆ ಅವರ ಅಭಿಮಾನಿಗಳದ್ದು.
ಬಿಜೆಪಿಗೆ ನಾವು ಮತ ಹಾಕುವುದಿಲ್ಲ, ನಮ್ಮ ನಾಯಕ ರಜಿನಿಕಾಂತ್ ಬಿಜೆಪಿ ಸೇರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ನಮಕ್ಕಲ್ ನಿಂದ ರಜಿನಿಕಾಂತ್ ಅವರನ್ನು ಭೇಟಿ ಮಾಡಲು ಬಂದ ಮತ್ತೊಬ್ಬ ಅಭಿಮಾನಿ ಕೆ.ಸೆಲ್ವಂ.
ಈ ಹಿಂದೆ ರಜಿನಿಕಾಂತ್ ಅವರನ್ನು ಸೆಳೆಯಲು ಬಿಜೆಪಿ ಹಲವು ಬಾರಿ ಪ್ರಯತ್ನಿಸಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಇತ್ತೀಚೆಗೆ ಆರ್ ಕೆ ನಗರ ಉಪ ಚುನಾವಣೆಯಲ್ಲಿ ಬಿಜೆಪಿಗೆ ಜನರು ನೀಡಿರುವ ತೀರ್ಪು ರಜಿನಿಕಾಂತ್ ಬಿಜೆಪಿ ಸೇರಲಿಕ್ಕಿಲ್ಲ ಎಂಬ ಭಾವನೆಯನ್ನು ಅವರ ಅಭಿಮಾನಿಗಳಲ್ಲಿ ಮೂಡಿಸಿದೆ.
ರಜನಿಕಾಂತ್ ಬಿಜೆಪಿಯ ಬಲೆಗೆ ಬೀಳುವುದಿಲ್ಲ ಎಂದು ನಾವು ಭಾವಿಸುತ್ತೇವೆ. ಜಾತಿ, ಧರ್ಮದ ಆಧಾರದ ಮೇಲೆ ರಜಿನಿಕಾಂತ್ ಬೇಧಭಾವ ಮಾಡುವುದಿಲ್ಲ. ಅವರು ಬಿಜೆಪಿ ಸೇರಿದರೆ ಹಿಂದಿನಂತೆ ಅವರು ಮುಂದುವರಿಯಲು ಸಾಧ್ಯವಿಲ್ಲ ಎಂದು ಮತ್ತೊಬ್ಬ ಅಭಿಮಾನಿ ಹೇಳುತ್ತಾರೆ.
ರಜಿನಿಕಾಂತ್ ಒಬ್ಬ ಉತ್ತಮ ಮನುಷ್ಯ.ಹೀಗಾಗಿ ಅವರನ್ನು ನಾವು ಬೆಂಬಲಿಸುತ್ತೇವೆ ಎಂದು ಹಲವು ಅಭಿಮಾನಿಗಳು ಹೇಳುತ್ತಾರೆ.
ಮೊನ್ನೆ ಮಂಗಳವಾರ ಮತ್ತು ಬುಧವಾರ ರಜಿನಿಕಾಂತ್ ಮಾಡಿದ ಭಾಷಣದಲ್ಲಿ ಅವರು ಯಾವ ಪಕ್ಷ ಸೇರುತ್ತಾರೆ, ಅಥವಾ ತಮ್ಮ ಸ್ವಂತ ಪಕ್ಷ ಕಟ್ಟುತ್ತಾರೆಯೇ ಎಂಬ ಬಗ್ಗೆ ತಿಳಿದುಬಂದಿಲ್ಲ. ನಟ ಕಮಲ್ ಹಾಸನ್ ಮತ್ತು ವಿಶಾಲ್ ಅವರಂತೆ ತಮಿಳುನಾಡಿನ ಸಮಸ್ಯೆಗಳು ಮತ್ತು ಪರಿಹಾರಗಳ ಬಗ್ಗೆ ಕೂಡ ಮಾತನಾಡಿರಲಿಲ್ಲ.