ಗುಜರಾತ್ ನೂತನ ಸಂಪುಟದಲ್ಲಿ ಬಿರುಕು? ಅಧಿಕಾರ ವಹಿಸಿಕೊಳ್ಳದ ಡಿಸಿಎಂ

ಎರಡನೇ ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ವಿಜಯ್ ರೂಪಾನಿ ನೇತೃತ್ವದ ಬಿಜೆಪಿ....
ನಿತಿನ್ ಪಟೇಲ್ ಮತ್ತು ವಿಜಯ್ ರೂಪಾನಿ
ನಿತಿನ್ ಪಟೇಲ್ ಮತ್ತು ವಿಜಯ್ ರೂಪಾನಿ
ಗಾಂಧಿನಗರ: ಎರಡನೇ ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ವಿಜಯ್ ರೂಪಾನಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಈಗ ಬಹಿರಂಗವಾಗುತ್ತಿದ್ದು, ವಿತ್ತ, ನಗರಾಭಿವೃದ್ಧಿ ಹಾಗೂ ಪೆಟ್ರೋಲಿಯಂ ಖಾತೆಗಳು ಕೈ ತಪ್ಪಿರುವುದಕ್ಕೆ ಅಸಮಾಧಾನಗೊಂಡಿರುವ ಉಪ ಮುಖ್ಯಮಂತ್ರಿ ನಿತಿನ್‌ ಪಟೇಲ್‌ ಅಧಿಕಾರ ವಹಿಸಿಕೊಳ್ಳದೇ ಕಚೇರಿಯಿಂದ ದೂರು ಉಳಿದಿದ್ದಾರೆ.
ನಿನ್ನೆ ಸಚಿವಾಲಯದಲ್ಲಿ ಹಲವು ಸಚಿವರು ಅಧಿಕಾರ ಸ್ವೀಕರಿಸಿದರೂ ಉಪ ಮುಖ್ಯಮಂತ್ರಿಯಾಗಿ ನಿತಿನ್‌ ಪಟೇಲ್‌ ಅವರು ತಮ್ಮ ಕಚೇರಿಯಲ್ಲಿ ಗೈರು ಹಾಜರಾಗಿರುವುದು ಗಮನ ಸೆಳೆದಿತ್ತು. ಪಟೇಲ್‌ ಅವರು ಕಚೇರಿಗೆ ಹಾಜರಾಗಿರಲಿಲ್ಲ ಅಷ್ಟೇ ಅಲ್ಲ, ಅವರು ಸರ್ಕಾರಿ ಎಸ್ಕಾರ್ಟ್‌ ವಾಹನದ ಬದಲಿಗೆ ತಮ್ಮದೇ ಆದ ವಾಹನ ಬಳಸುತ್ತಿದ್ದಾರೆ ಎಂದೂ ಶಾಸಕಾಂಗ ಕಚೇರಿಯ ಅಧಿಕಾರಿಗಳು ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ನಿತಿನ್ ಪಟೇಲ್ ಅವರು ಈ ಬಾರಿಯೂ ವಿತ್ತ ಮತ್ತು ನಗರಾಭಿವೃದ್ಧಿ ಖಾತೆಗೆ ಮನವಿ ಮಾಡಿದ್ದರು. ಆದರೆ ಅದು ನೀಡದಿರುವುದಕ್ಕೆ ಅವರು ಅಸಮಾಧಾನಗೊಂಡಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಪ್ರಮುಖ ಖಾತೆಗಳು ಕೈ ತಪ್ಪಿರುವುದಕ್ಕೆ ಪಟೇಲ್‌ ಅವರು ಅಸಮಾಧಾನಗೊಂಡಿರುವ ಬಗ್ಗೆ ಉನ್ನತ ನಾಯಕತ್ವಕ್ಕೂ ಅರಿವಿದೆ. ಇದನ್ನು ಒಂದೆರಡು ದಿನಗಳಲ್ಲಿ ಪರಿಹರಿಸಲಾಗುವುದು ಎಂದು ಅವರು ಹೇಳಿದ್ದು, ನಾಯಕರು ಅದರಂತೆ ನಡೆದುಕೊಳ್ಳದಿದ್ದರೆ ಸ್ವಾಭಿಮಾನಕ್ಕೆ ಧಕ್ಕೆಯಾಗುವ ಕಾರಣ ಪಟೇಲ್‌ ಅವರು ಸರ್ಕಾರದಿಂದ ಹೊರ ಬರುವ ಸಾಧ್ಯತೆಗಳಿವೆ ಎಂದು ಉನ್ನತ ಆಪ್ತ ಮೂಲವೊಂದು ಹೇಳಿದೆ.
ಪ್ರಮುಖವಾದ ವಿತ್ತ ಖಾತೆಯನ್ನು ಕಿರಿಯ ಸಹೋದ್ಯೋಗಿ ಸೌರಭ್‌ ಪಟೇಲ್‌ಗೆ ನೀಡಲಾಗಿದೆ. ನಗರಾಭಿವೃದ್ಧಿ ಖಾತೆಯನ್ನು ಮುಖ್ಯಮಂತ್ರಿ ವಿಜಯ್‌ ರೂಪಾನಿ ಇರಿಸಿಕೊಂಡಿದ್ದಾರೆ. ಹೀಗೆ ಪಟೇಲ್‌ ನಾನಾ ಕಾರಣಗಳಿಗೆ ಬೇಸರಗೊಂಡಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com