
ಶ್ರೀನಗರ: ಒಂದೆಡೆ ಭಾರಿ ಹಿಮಪಾತ ತನ್ನ ರೌದ್ರ ನರ್ತನದಿಂದ ಕಾಶ್ಮೀರದವನ್ನು ನಡುಗಿಸುತ್ತಿದ್ದರೆ, ಇತ್ತ ಅದೇ ಹಿಮಪಾತದ ನಡುವೇ ಭಾರತೀಯ ಯೋಧನೋರ್ವ ತನ್ನ ತಾಯಿಯ ಶವವನ್ನು ಹೆಗಲಮೇಲೆ ಹಾಕಿಕೊಂಡು ಸುಮಾರು 50 ಕಿ.ಮೀ ದೂರ ಸಾಗಿರುವ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ತಾಯಿ ಮೃತಪಟ್ಟು 4 ದಿನಗಳು ಕಳೆದಿದ್ದು, ತಾಯಿ ಅಂತ್ಯಸಂಸ್ಕಾರ ನೆರವೇರಿಲ್ಲ. ಹೀಗಾಗಿ ಅಂತ್ಯ ಸಂಸ್ಕಾರಕ್ಕಾಗಿ ತಾಯಿ ಶವ ರವಾನೆಗೆ ಹೆಲಿಕಾಪ್ಟರ್ ಕಳುಹಿಸಿಕೊಡುವಂತೆ ಸ್ಥಳೀಯ ಜಿಲ್ಲಾಡಳಿತಕ್ಕೆ ಯೋಧ ಮೊರೆ ಇಟ್ಟಿದ್ದ. ಆದರೆ ಜಿಲ್ಲಾಡಳಿತದಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಾರದ ಹಿನ್ನಲೆಯಲ್ಲಿ ತನ್ನ ತಾಯಿ ಶವವನ್ನು ಹೆಗಲಿಗೇರಿಸಿಕೊಂಡ ಯೋಧ ಸುಮಾರು 50 ಕಿ.ಮೀ ಸಾಗಿದ್ದಾನೆ. ಆಘಾತಕಾರಿ ಅಂಶವೆಂದರೆ ಹಿಮಪಾತದಿಂದ ಇಡೀ ಕಾಶ್ಮೀರ ನಲುಗಿ ಹೋಗಿದ್ದು, ಹಿಮಪಾತ ನಡೆದ ರಸ್ತೆಯಲ್ಲೇ ಯೋಧ ತನ್ನ ತಾಯಿಯ ಶವವನ್ನು ಹೊತ್ತು ಸಾಗಿ ಕಡೆಗೂ ಅಂತ್ಯ ಸಂಸ್ಕಾರ ನೆರವೇರಿಸಿದ್ದಾನೆ.
ಮೂಲಗಳ ಪ್ರಕಾರ 25 ವರ್ಷದ ಯೋಧ ಮಹಮ್ಮದ್ ಅಬ್ಬಾಸ್ ಪಠಾಣ್ ಕೋಟ್ ನಲ್ಲಿ ಸೇವೆಸಲ್ಲಿಸುತ್ತಿದ್ದು, ಆತನೊಂದಿಗೇ ಆತನ ತಾಯಿ ಸಕೀನಾ ಬೇಗಂ ಕೂಡ ಆತನೊಂದಿಗೆ ನೆಲೆಸಿದ್ದರು. ಜನವರಿ 27ರ ರಾತ್ರಿ ಹೃದಯಾಘಾತಕ್ಕೊಳಗಾದ ಸಕೀನಾ ಬೇಗಂ ಅವರು ಮೃತಪಟ್ಟಿದ್ದರು. ಆಕೆಯ ಅಂತ್ಯಸಂಸ್ಕಾರವನ್ನು ಕಾರ್ನಾದಲ್ಲಿರುವ ಅಬ್ಬಾಸ್ ರ ಸ್ವಗೃಹದಲ್ಲಿ ನೆರವೇರಿಸಲು ನಿರ್ಧರಿಸಲಾಗಿತ್ತು. ಹೀಗಾಗಿ ಪಾರ್ಥೀವ ಶರೀರವನ್ನು ಕರ್ನಾ ತರಲು ಸಿದ್ಥತೆ ನಡೆಸಲಾಗಿತ್ತು. ಆದರೆ ಕರ್ನಾಗೆ ಸಂಪರ್ಕ ಕಲ್ಪಿಸುವ ರಂಗ್ವಾರ್ ನ ಗ್ಯಾರಿಸನ್ ರಸ್ತೆ ಹಿಮಪಾತದಿಂದ ಮುಚ್ಚಿಹೋಗಿತ್ತು. ಹೀಗಾಗಿ ಯೋಧ ಅಬ್ಬಾಸ್ ಹೆಲಿಕಾಪ್ಟರ್ನ ವ್ಯವಸ್ಥೆ ಮಾಡುವಂತೆ ಸ್ಥಳೀಯ ಆಡಳಿತವನ್ನು ಕೇಳಿಕೊಂಡಿದ್ದರು. ಆದರೆ ಜಿಲ್ಲಾಡಳಿತ ಯಾವುದೇ ವ್ಯವಸ್ಥೆ ಮಾಡಿರಲಿಲ್ಲ. ಹೀಗಾಗಿ ಬೇರೆ ದಾರಿಯಿಲ್ಲದೇ ಅಬ್ಬಾಸ್ ಗುರುವಾರ ಬೆಳಗ್ಗೆ ತಾಯಿಯ ದೇಹವನ್ನು ಹೆಗಲಿಗೇರಿಸಿಕೊಂಡು ನಡೆದೇ 50 ಕಿಮೀ ದೂರದಲ್ಲಿರುವ ಸ್ವಗ್ರಾಮ ಕರ್ನಾವನ್ನು ತಲುಪಿದ್ದಾರೆ. ಅಲ್ಲದೆ ಅವರ ಅಂತ್ಯ ಸಂಸ್ಕಾರವನ್ನೂ ಕೂಡ ಮಾಡಿದ್ದಾರೆ.
ಜಿಲ್ಲಾಡಳಿತದ ವಿರುದ್ಧ ಯೋಧನ ಅಸಮಾಧಾನ
ತಾಯಿ ಶವ ಸಂಸ್ಕಾರಕ್ಕೆ ಹೆಲಿಕಾಪ್ಟರ್ ರವಾನಿಸದ ಸ್ಥಳೀಯ ಆಡಳಿತದ ವಿರುದ್ಧ ಅಬ್ಬಾಸ್ ಅಸಮಾಧಾನ ವ್ಯಕ್ತಪಡಿಸಿದ್ದು, ಸರಿಯಾದ ರೀತಿಯಲ್ಲಿ ತಾಯಿಯ ಅಂತ್ಯಸಂಸ್ಕಾರವನ್ನು ನಡೆಸುವುದಕ್ಕೂ ಸಾಧ್ಯವಾಗಲಿಲ್ಲ. ಸ್ಥಳೀಯ ಆಡಳಿತ ನಾಲ್ಕು ದಿನಗಳಿಂದ ಹೆಲಿಕಾಪ್ಟರ್ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿತ್ತೇ ವಿನಾ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಗುರುವಾರ ಕರೆಯನ್ನೂ ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ ಬೇರೆ ದಾರಿ ಕಾಣದೇ ಪ್ರಾಣಾಪಾಯವನ್ನೂ ಲೆಕ್ಕಿಸದೇ ತಾಯಿಯ ಮೃತದೇಹವನ್ನು ಹೊತ್ತು ತರಬೇಕಾಯಿತು ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಹವಾಮಾನ ವೈಪರೀತ್ಯ ಎಂದ ಅಧಿಕಾರಿಗಳು
ಯೋಧ ಅಬ್ಬಾಸ್ ಆರೋಪವನ್ನು ಅಲ್ಲಗಳೆದಿರುವ ಅಧಿಕಾರಿಗಳು ಜಿಲ್ಲಾಡಳಿತದ ವತಿಯಿಂದ ಹೆಲಿಕಾಪ್ಟರ್ನ ವ್ಯವಸ್ಥೆ ಮಾಡಲಾಗಿತ್ತು. ಹವಾಮಾನದ ಕಾರಣದಿಂದ ಹೆಲಿಕಾಪ್ಟರ್ ಟೇಕ್ಆಫ್ ಆಗುವುದೋ ಇಲ್ಲವೋ ಎಂಬ ಅನುಮಾನದಿಂದ ಕುಟುಂಬಸ್ಥರೇ ಹೆಲಿಕಾಪ್ಟರ್ ನಿರಾಕರಿಸಿದ್ದರು. ಹೀಗಾಗಿ ಹೆಲಿಕಾಪ್ಟರ್ ರವಾನಿಸಿರಲಿಲ್ಲ ಎಂದು ಹೇಳಿದ್ದಾರೆ. ಆದರೆ ಜಿಲ್ಲಾಡಳಿತದ ಸ್ಪಷ್ಟನೆಯಿಂದ ಸಮಾಧಾನಗೊಳ್ಳದ ಸ್ಥಳೀಯರು ಹಾಗೂ ಕರ್ನಾ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ.
Advertisement