
ಲಂಬಿ(ಪಂಜಾಬ್): ಉಗ್ರರರೊಂದಿಗೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಕೈಜೋಡಿಸಿದ್ದು, ಆಪ್ ಪಕ್ಷಕ್ಕೆ ಐಎಸ್ಐ (ಪಾಕಿಸ್ತಾನ ಆಂತರಿಕ ಗುಪ್ತಚರ ಇಲಾಖೆ) ಆರ್ಥಿಕ ನೆರವು ನೀಡುತ್ತಿದೆ ಎಂದು ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಅವರು ಶನಿವಾರ ಆರೋಪಿಸಿದ್ದಾರೆ.
ಪಂಜಾಬ್ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಆರಂಭವಾಗಿದ್ದು, ಮತಗಟ್ಟೆಯೊಂದಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಪಂಜಾಬ್ ರಾಜ್ಯದಲ್ಲಿ ಎಸ್ಎಡಿ-ಬಿಜೆಪಿ ಪಕ್ಷಗಳು ಸರ್ಕಾರ ರಚಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಕೇಜ್ರಿವಾಲ್ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿರುವ ಅವರು, ರಾಷ್ಟ್ರ ರಾಜಧಾನಿಯಲ್ಲಿ ಕೇಜ್ರಿವಾಲ್ ಅವರು ಉತ್ತಮ ಕೆಲಸವನ್ನು ಮಾಡಲಿಲ್ಲ. ಇದೀಗ ಪಂಜಾಬ್ ರಾಜ್ಯವನ್ನು ನಾಶ ಮಾಡಲು ಆಲೋಚನೆ ಮಾಡುತ್ತಿದ್ದಾರೆ. ಉಗ್ರರೊಂದಿಗೆ ಕೈಜೋಡಿಸಿ ಕೇಜ್ರಿವಾಲ್ ಅವರು ಮಾಡುತ್ತಿರುವ ರಾಜಕೀಯ ನಿಜಕ್ಕೂ ಭಯವನ್ನುಂಟು ಮಾಡುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. 30 ವರ್ಷಗಳ ಬಳಿಕ ಪಂಜಾಬ್ ನಲ್ಲಿ ಬಾಂಬ್ ಸ್ಫೋಟಗೊಂಡಿದೆ. ಕೇಜ್ರಿವಾಲ್ ಸಂಸದರು ಜನರು ಹೊಡೆದಾಡುವಂತೆ ಮಾಡುತ್ತಿದ್ದಾರೆ. ಬಬ್ಬರ್ ಖಾಲ್ಸಾ ಉಗ್ರರೊಂದಿಗೆ ಸ್ವತಃ ಕೇಜ್ರಿವಾಲ್ ಅವರೇ ತಿಂಡಿ ಹಾಗೂ ಊಟವನ್ನು ಮಾಡುತ್ತಿದ್ದಾರೆ. ಇದರೊಂದಿಗೆ ಕೇಜ್ರಿವಾಲ್ ಅವರು ಐಎಸ್ಐ ಜೊತೆಗೆ ಕೈ ಜೋಡಿಸಿರುವುದು ಹಾಗೂ ಐಎಸ್ಐ ಕೇಜ್ರಿವಾಲ್ ಅವರಿಗೆ ಆರ್ಥಿಕ ನೆರವು ನೀಡುತ್ತಿರುವುದನ್ನು ಸ್ಪಷ್ಟಪಡಿಸುತ್ತದೆ ಎಂದು ಆರೋಪಿಸಿದ್ದಾರೆ.
Advertisement