ಮಧುರೈ: ಜಿಲ್ಲೆಯ ಆವನಿಯಪುರಂನಲ್ಲಿ ಭಾನುವಾರ ಆಯೋಜಿಸಲಾಗಿದ್ದ ಜಲ್ಲಿಕಟ್ಟು ಕ್ರೀಡೆ ವೇಳೆ 36 ಮಂದಿ ಗಾಯಗೊಂಡಿದ್ದು ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಸ್ಪರ್ಧೆ ನಡೆಯುತ್ತಿರುವ ಸಮೀಪ ಹಾಕಲಾಗಿರುವ ಟೆಂಟ್ ನಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
700ಕ್ಕೂ ಹೆಚ್ಚು ಎತ್ತಿನ ಜೊತೆ ಸೆಣಸುವ ಸ್ಪರ್ಧಾಳುಗಳು ಭಾಗವಹಿಸಿದ್ದು ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಜನರು ಪಂದ್ಯ ವೀಕ್ಷಿಸಲು ಜಮಾಯಿಸಿದ್ದರು. ಜಲ್ಲಿಕಟ್ಟು ಸ್ಪರ್ಧೆಗೆ ಕಂದಾಯ ಸಚಿವ ಆರ್.ಬಿ. ಉದಯ ಕುಮಾರ್ ಮತ್ತು ಜಿಲ್ಲಾಧಿಕಾರಿ ವೀರರಾಘವ ರಾವ್ ಚಾಲನೆ ನೀಡಿದ್ದರು.
ಜಿಲ್ಲೆಯ ಹಿರಿಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.
ಸಾಂಪ್ರದಾಯಿಕ ಕ್ರೀಡೆ ಆರಂಭಿಸುವ ಮೊದಲು ಎಲ್ಲಾ ವೈದ್ಯಕೀಯ ಪರೀಕ್ಷೆಗಳನ್ನು ಎತ್ತುಗಳಿಗೆ ಮತ್ತು ಸ್ಪರ್ಧಾಳುಗಳಿಗೆ ಮಾಡಲಾಗಿತ್ತು. ನಿಯಮಾನುಸಾರವೇ ಸ್ಪರ್ಧೆಗೆ ಅನುಮತಿ ನೀಡಿದ್ದೇವೆ ಎಂದು ಹೇಳಿದ್ದಾರೆ.