ಕಮಲಕ್ಕೆ ಬಣ್ಣ ಹಚ್ಚಿದ ನಿತೀಶ್ ಕುಮಾರ್, ಬಿಜೆಪಿಯೊಂದಿಗೆ ಮೈತ್ರಿಯ ಸೂಚನೆ?

ಬಿಹಾರ ರಾಜಧಾನಿ ಪಾಟ್ನಾದಲ್ಲಿ ನಡೆಯುತ್ತಿರುವ ಪಾಟ್ನಾ ಪುಸ್ತಕ ಪರಿಷೆಯಲ್ಲಿ ಸಿಎಂ ನಿತೀಶ್ ಕುಮಾರ್ ಕಮಲ (ಬಿಜೆಪಿ ಪಕ್ಷದ ಗುರುತು) ಕ್ಕೆ ಬಣ್ಣ ಹಚ್ಚಿ ಅಚ್ಚರಿ ಮೂಡಿಸಿದ್ದಾರೆ.
ನಿತೀಶ್ ಕುಮಾರ್
ನಿತೀಶ್ ಕುಮಾರ್
ಪಾಟ್ನಾ: ಬಿಹಾರ ರಾಜಧಾನಿ ಪಾಟ್ನಾದಲ್ಲಿ ನಡೆಯುತ್ತಿರುವ ಪಾಟ್ನಾ ಪುಸ್ತಕ ಪರಿಷೆಯಲ್ಲಿ ಸಿಎಂ ನಿತೀಶ್ ಕುಮಾರ್ ಕಮಲ (ಬಿಜೆಪಿ ಪಕ್ಷದ ಗುರುತು) ಕ್ಕೆ ಬಣ್ಣ ಹಚ್ಚಿ ಅಚ್ಚರಿ ಮೂಡಿಸಿದ್ದಾರೆ. 
ಕಲಾವಿದರೊಬ್ಬರು ರಚಿಸಿದ್ದ ಕಮಲದ ಚಿತ್ರಕ್ಕೆ ನಿತೀಶ್ ಕುಮಾರ್ ಬಣ್ಣ ಹಚ್ಚಿರುವುದು ಬಿಜೆಪಿಯೊಂದಿಗೆ ಮೈತ್ರಿಗೆ ಮುಂದಾಗುತ್ತಿರುವ ಸೂಚನೆಯೇ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಂಸದ ಗಿರಿರಾಜ್ ಸಿಂಗ್, ನಿತೀಶ್ ಕುಮಾರ್ ಬಣ್ಣ ಹಚ್ಚಿರುವುದು ಅವರ ರಾಜಕೀಯ ಮಹತ್ವಾಕಾಂಕ್ಷೆಯನ್ನು ಸೂಚಿಸುತ್ತದೆ, ಅಷ್ಟೇ ಅಲ್ಲದೇ ಇದು ಲಾಲು ಪ್ರಸಾದ್ ಯಾದವ್ ಅವರಿಗೆ ನೀಡಿರುವ ತಾವು ಸ್ವತಂತ್ರರು ಎಂಬ ಸಂದೇಶವೂ ಹೌದು ಎಂದು ಹೇಳಿದ್ದಾರೆ. 
2015 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು-ಕಾಂಗ್ರೆಸ್-ಆರ್ ಜೆಡಿ ಮಹಾಮೈತ್ರಿಗೆ ಬಹುಮತ ದೊರೆತಿತ್ತು. ಚುನಾವಣೆ ನಂತರ 2016 ರ ಮಾರ್ಚ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮೊದಲ ಬಾರಿಗೆ ವೇದಿಕೆ ಹಂಚಿಕೊಂಡಿದ್ದ ನಿತೀಶ್ ಕುಮಾರ್, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಹಕಾರವನ್ನು ಮುಕ್ತ ಮನಸ್ಸಿನಿಂದ ಶ್ಲಾಘಿಸಿ, ಬಿಜೆಪಿಯೊಂದಿಗಿನ ಮೈತ್ರಿ ಬಗ್ಗೆ ಸುಳಿವು ನೀಡಿದ್ದರು. ಅದೇ ಕಾರ್ಯಕ್ರಮದಲ್ಲಿ ನಿತೀಶ್ ಕುಮಾರ್ ಅವರನ್ನು ನರೇಂದ್ರ ಮೋದಿ ಮಿತ್ರ ಎಂದು ಸಂಬೋಧಿಸಿ ಅಚ್ಚರಿ ಮೂಡಿಸಿದ್ದರು. 
ಇನ್ನು ಇತ್ತೀಚೆಗಷ್ಟೇ ನೋಟು ನಿಷೇಧದ ವಿಚಾರದಲ್ಲಿಯೂ ನಿತೀಶ್ ಕುಮಾರ್ ನರೇಂದ್ರ ಮೋದಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ನೋಟು ನಿಷೇಧಕ್ಕೆ ಬೆಂಬಲ ಘೋಷಿಸಿದ್ದರು. ಇದಾದ ಬಳಿಕ ಬಿಹಾರದಲ್ಲಿ ಮದ್ಯ ನಿಷೇಧ ಮಾಡಿದ್ದ ನಿತೀಶ್ ಕುಮಾರ್ ಸರ್ಕಾರದ ಕ್ರಮವನ್ನು ನರೇಂದ್ರ ಮೋದಿ ಸ್ವಾಗತಿಸಿದ್ದರು. ಈ ಬೆನ್ನಲ್ಲೇ  ಕಮಲಕ್ಕೆ ಬಣ್ಣ ಹಚ್ಚುವ ಮೂಲಕ ನಿತೀಶ್ ಕುಮಾರ್ ರಾಜಕೀಯ ನಡೆಯ ಮುನ್ಸೂಚನೆ ನೀಡಿದ್ದಾರಾ ಎಂಬ ಕುತೂಹಲ ಮೂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com