
ನವದೆಹಲಿ: ಯೋಧರ ಊಟದ ಕುರಿತ ದೂರುಗಳನ್ನು ಸೇನಾದಂಗೆ ಎಂದು ಟೀಕಿಸಿದ ಮೇಜರ ಜನರಲ್ ಭಕ್ಷಿ ವಿರುದ್ಧ ಯೋಧನೊಬ್ಬ ಕಿಡಿಕಾರಿದ್ದು, ನಿಮ್ಮಂತಹ ನಿಮ್ಮಂತಹ ಕಪ್ಪು ಬ್ರಿಟೀಷರಿಂದಲೇ ಕಮಿಷನ್ಡ್ ಅಧಿಕಾರಿಗಳ ಹಾಗೂ ಸೈನಿಕರ ನಡುವಿನ ಕಂದಕ ಹೆಚ್ಚಾಗಿದೆ ಎಂದು ಟೀಕಿಸಿದ್ದಾರೆ.
ಇತ್ತೀಚೆಗಷ್ಟೇ ಯೋಧರು ಸೇನೆಯಲ್ಲಿನ ತಮ್ಮ ಸಮಸ್ಯೆಗಳ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದ ದೂರಿನ ವಿಡಿಯೋ ಕುರಿತಂತೆ ಸುದ್ದಿವಾಹಿನಿಯೊಂದರಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದ ನಿವೃತ್ತ ಸೇನಾಧಿಕಾರಿ ಮೇಜರ್ ಜನರಲ್ ಭಕ್ಷಿ ಅವರು, ಸೇನಾ ದಂಗೆ ಎಂದು ಟೀಕಿಸಿದ್ದರು. ಇದಕ್ಕೆ ಪ್ರತ್ಯುತ್ತರ ಎಂಬಂತೆ ಯೋಧನೋರ್ವ ಮತ್ತೊಂದು ವಿಡಿಯೋ ಹರಿಬಿಟ್ಟಿದ್ದು, ವಿಡಿಯೋದಲ್ಲಿ ಭಕ್ಷಿ ಹಾಗೂ ಸೇನೆಯಲ್ಲಿನ ಭ್ರಷ್ಟ ಅಧಿಕಾರಿಗಳ ಮುಖವಾಡ ಬಯಲು ಮಾಡಿದ್ದಾರೆ.
ಯೋಧರಿಗೆ ನೀಡಲಾಗುತ್ತಿರುವ ಕಳಪೆ ಆಹಾರದ ಬಗೆಗೆ ಹೇಳಿಕೆ ನೀಡಿರುವ ಬಿಎಸ್ ಎಫ್ ಯೋಧ ತೇಜ್ ಬಹಾದ್ದೂರ್ ಯಾದವ್ ಅವರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಹಲವಾರು ಇತರ ಯೋಧರೂ ಇದೇ ರೀತಿ ತಮ್ಮ ನೋವು ತೋಡಿಕೊಂಡಿದ್ದರು. ಏತನ್ಮಧ್ಯೆ ತನ್ನ ಪತಿಯನ್ನು ಬಂಧಿಸಲಾಗಿದೆ ಹಾಗೂ ಅವರನ್ನು ಹಿಂಸಿಸಲಾಗುತ್ತಿದೆ ಎಂದು ತೇಜ್ ಬಹಾದ್ದೂರ್ ಅವರ ಪತ್ನಿ ಆರೋಪಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು, ಸಮಸ್ಯೆಗಳಿದ್ದರೆ ತಮ್ಮ ಬಳಿ ಹೇಳಿಕೊಳ್ಳಬೇಕೇ ಹೊರತು ಸಾಮಾಜಿಕ ಜಾಲತಾಣ ಅಥವಾ ಮಾಧ್ಯಮಗಳಲ್ಲಿ ಅಲ್ಲ ಎಂದು ಹೇಳಿದ್ದರು.
ಇದೀಗ ಇನ್ನೊಂದು ಬೆಳವಣಿಗೆಯಲ್ಲಿ ಇನ್ನೊಬ್ಬ ಸೈನಿಕನೊಬ್ಬನ ವೀಡಿಯೊವೊಂದು ಬಹಿರಂಗಗೊಂಡಿದ್ದು, ಸೈನಿಕ ತನ್ನ ವಿಡಿಯೊದಲ್ಲಿ ಟಿವಿ ಚರ್ಚಾ ಕಾರ್ಯಕ್ರಮವೊಂದರಲ್ಲಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಗಗನದೀಪ್ ಭಕ್ಷಿ ಎಂಬವರು ಜವಾನರು ಕಳಪೆ ಆಹಾರದ ವಿರುದ್ಧ ಪ್ರತಿಭಟಿಸಿದ್ದಕ್ಕೆ ‘ಮ್ಯುಟಿನಿ’ (ದಂಗೆ) ಎಂಬ ಪದ ಉಪಯೋಗಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಂದರ್ಶನದ ವೇಳೆ ಮೇಜರ್ ಜನರಲ್ ಭಕ್ಷಿ ಮ್ಯುಟಿನಿ (ಸೇನಾ ದಂಗೆ) ಎಂಬ ಪದ ಬಳಕೆ ಮಾಡಿದ್ದು ಸೈನಿಕನ ಪಿತ್ತ ನೆತ್ತಿಗೇರುವಂತೆ ಮಾಡಿದ್ದು, ನೇರನಾಗಿ ಭಕ್ಷಿ ಅವರನ್ನೇ ಸೈನಿಕ ತರಾಟೆಗೆ ತೆಗೆದುಕೊಂಡಿದ್ದಾರೆ. ‘‘ಜವಾನರು ಕೆಟ್ಟ ಆಹಾರ, ಸುಟ್ಟ ರೊಟ್ಟಿ ಹಾಗೂ ನೀರು ನೀರಾದ ದಾಲ್ ಬಗ್ಗೆ ದೂರಿದ ವೀಡಿಯೊ ವೈರಲ್ ಆಗಿದ್ದರೆ, ಟಿವಿ ಚರ್ಚೆಯಲ್ಲಿ ಜನರಲ್ ಭಕ್ಷಿ ಇದನ್ನು ಮ್ಯುಟಿನಿ ನಾಟಕ (ಸೇನಾ ದಂಗೆ ನಾಟಕ)ಎಂದಿದ್ದಾರೆ. ಭಕ್ಷಿ ಸಾಹೇಬರೇ, ಬ್ರಿಟೀಷರ ಸೇನೆ ಹಾಗೂ ಆಡಳಿತದ ವಿರುದ್ಧ 1857ರಲ್ಲಿ ನಮ್ಮ ಸೈನಿಕರು ಸಿಡಿದೆದ್ದಿದ್ದಕ್ಕೆ ಅವರು ಕೂಡಾ ಮ್ಯುಟಿನಿ ಎಂಬ ಶಬ್ದ ಉಪಯೋಗಿಸಿದ್ದರು. 1857ನೆ ಸೇನಾ ದಂಗೆಯ ನಂತರ ಈ ಶಬ್ದವನ್ನು ಅವರು ಪ್ರಯೋಗಿಸಿದ್ದರು ಹಾಗೂ ದಂಗೆಯೆದ್ದ ಸೈನಿಕರನ್ನು ಕೋರ್ಟ್ ಮಾರ್ಷಲ್ ಮಾಡಿ ಅವರಿಗೆ ಮರಣದಂಡನೆ ವಿಧಿಸಿದ್ದರು. ಈ ದಂಗೆಯು ಬ್ರಿಟಿಷ್ ಸೇನೆ ಭಾರತೀಯ ಸೈನಿಕರು ಹಾಗೂ ಜನರ ಮೇಲೆ ನಡೆಸುತ್ತಿರುವ ದೌರ್ಜನ್ಯದ ವಿರುದ್ಧವಾಗಿತ್ತು. ಆದರೆ ಭಾರತೀಯ ಸೈನಿಕರು ದೇಶದ್ರೋಹಿಗಳಲ್ಲ ಹಾಗೂ ಸೇನೆಯಲ್ಲಿ ದಂಗೆ ನಡೆಸುವುದಿಲ್ಲ. ನಿಮ್ಮಂತಹ ಕಪ್ಪು ಬ್ರಿಟೀಷರಿಂದಲೇ ಸೇನೆಯ ಕಮಿಷನ್ಡ್ ಅಧಿಕಾರಿಗಳು ಹಾಗೂ ಸೈನಿಕರ ನಡುವಿನ ಕಂದಕಗಳು ಮತ್ತಷ್ಟು ಆಳವಾಗಿವೆ. ನಂಬಿಕೆ ಕುಸಿಯುತ್ತಿದ್ದು, ಪರಸ್ಪರ ಅಪನಂಬಿಕೆ ಮೇಲೆ ಬದುಕುವಂತಾಗಿದೆ. ತನಿಖೆಯು ನಿಮ್ಮಂತಹ ಅಧಿಕಾರಿಗಳ ವಿರುದ್ಧ ನಡೆಯಬೇಕು. ನೀವು ಜವಾನರನ್ನು ನಿಮ್ಮ ಮನೆಯ ನೌಕರರನ್ನಾಗಿಸಿದ್ದೀರಿ. ದೇಶದ ಗಡಿ ಕಾಯಲು ಅಲ್ಲ..ನಿಮ್ಮ ಮನೆಯ ಮಕ್ಕಳು ಮಲ-ಮೂತ್ರ ಮಾಡಿದರೆ ಸ್ವಚ್ಛಗೊಳಿಸಲು ಸೈನಿಕರು ಬೇಕು, ನಿಮ್ಮ ಮನೆಯ ನಾಯಿಯನ್ನು ವಾಕಿಂಗ್ ಗೆ ಕರೆದೊಯ್ಯಲು ಅಷ್ಟೇ ಅದು ಮಲ ಮಾಡಿದರೂ ಅದನ್ನೂ ನಾವೇ ಶುಚಿಗೊಳಿಸಬೇಕು. ಒಂದು ರೀತಿಯಲ್ಲಿ ಸೈನಿಕರನ್ನು ನಿಮ್ಮ ಮನೆಯ ಕೆಲಸವರನ್ನಾಗಿ ಮಾಡಿಕೊಂಡಿದ್ದೀರಿ. ನಿಮ್ಮ ಬಟ್ಟೆ ಒಗೆಯ ಬೇಕು, ಶೂ ಪಾಲಿಶ್ ಮಾಡಬೇಕು..ಇವೆಲ್ಲವನ್ನೂ ಸಹಿಸಿಕೊಂಡು ಜವಾನರು ತಮ್ಮ ಸಮಸ್ಯೆ ಹೇಳಿಕೊಂಡು ರಜೆಯೇ ಕೇಳಿದರೆ ಅವರಿಗೆ ರಜೆ ನೀಡುವುದಿಲ್ಲ’’ ಎಂದು ವೀಡಿಯೊದಲ್ಲಿ ಸೈನಿಕ ಕಿರಿದ್ದಾರೆ.
ಪ್ರಸ್ತುತ ಹರಿದಾಡುತ್ತಿರುವ ಈ ವಿಡಿಯೋವನ್ನು ನೀಲಿಮ್ ದತ್ತಾ ಎಂಬ ಟ್ವಿಟರ್ ಖಾತೆದಾರರು ಷೇರ್ ಮಾಡಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.
Advertisement