ಪಂಜಾಬ್: 48 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶ

ಇದೇ ಫೆಬ್ರವರಿ 4ರಂದು ಪಂಜಾಬ್ ನಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯ ಮತದಾನದ ವೇಳೆ ದೋಷ ಕಂಡುಬಂದ ಹಿನ್ನಲೆಯಲ್ಲಿ 48 ಮತಗಟ್ಟೆಗಳಲ್ಲಿ ಮರು ಮತದಾನ ನಡೆಸುವಂತೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚಂಡೀಘಡ: ಇದೇ ಫೆಬ್ರವರಿ 4ರಂದು ಪಂಜಾಬ್ ನಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯ ಮತದಾನದ ವೇಳೆ ದೋಷ ಕಂಡುಬಂದ ಹಿನ್ನಲೆಯಲ್ಲಿ 48 ಮತಗಟ್ಟೆಗಳಲ್ಲಿ ಮರು ಮತದಾನ ನಡೆಸುವಂತೆ ಕೇಂದ್ರ ಚುನಾವಣಾ  ಆಯೋಗ ಮಂಗಳವಾರ ಆದೇಶಿಸಿದೆ.

ಚುನಾವಣಾ ಆಯೋಗದ ಮೂಲಗಳು ತಿಳಿಸಿರುವಂತೆ ಇದೇ ಫೆಬ್ರವರಿ 9ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಗಳವರೆಗೂ 48 ಮತಗಟ್ಟೆಗಳಲ್ಲಿ ಮರು ಮತದಾನ ನಡೆಯಲಿದೆ ಎಂದು ತಿಳಿದುಬಂದಿದೆ. ಈ ಪೈಕಿ  ಅಮೃತಸರದ 16 ಮತಗಟ್ಟೆ, ಮಜಿತಾದ 12,  ಮೋಗಾದ ಒಂದು, ಮುಖ್ತಸರ್ ನ 9, ಸಾರ್ದುಲ್ ಘಡ್ ನ 6 ಮತ್ತು ಸಂಗ್ರೂರ್ ನ 6 ಮತಗಟ್ಟೆಗಳಲ್ಲಿ ಫೆಬ್ರವರಿ 9ರಂದು ಮರು ಮತದಾನ ನಡೆಯಲಿದೆ.

ಈ ಹಿಂದೆ ಫೆಬ್ರವರಿ 4ರಂದು ನಡೆದಿದ್ದ ಮತದಾನದ ವೇಳೆ ಸಾಕಷ್ಟು ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು. ಮತದಾರರ ಪಟ್ಟಿಯಲ್ಲಿ ದೋಷ ಹಾಗೂ ಮತಯಂತ್ರದಲ್ಲಿನ ದೋಷದಿಂದಾಗಿ ಮತದಾನಕ್ಕೆ  ಅಡ್ಡಿಯಾಗಿತ್ತು. ಹೀಗಾಗಿ ಕೇಂದ್ರ ಚುನಾವಣಾ ಆಯೋಗ ಈ ಭಾಗಗಳಲ್ಲಿ ಮರು ಮತದಾನಕ್ಕೆ ಆದೇಶ ನೀಡಿದೆ. ಈ ಹಿಂದೆ ನಡೆದ ಮತದಾನದ ವೇಳೆ ಚುನಾವಣಾ ಆಯೋಗ ಮತದಾನಕ್ಕಾಗಿ 24,697 ಮತ ಯಂತ್ರ ಹಾಗೂ  24,256 ನಿಯಂತ್ರಕಗಳನ್ನು ಬಳಕೆ ಮಾಡಿಕೊಂಡಿತ್ತು. ಈ ಪೈಕಿ 180 ಮತಯಂತ್ರ ಹಾಗೂ 184 ನಿಯಂತ್ರಕಗಳು ತಾಂತ್ರಿಕ ದೋಷದಿಂದಾಗಿ ಸ್ಥಗಿತಗೊಂಡಿದ್ದವು.

ಪಂಜಾಬ್ ನ ಒಟ್ಟು 117 ವಿಧಾನಸಭಾ ಕ್ಷೇತ್ರಗಳಿಗೆ ಮತದಾನವಾಗಿದ್ದು, ಫೆಬ್ರವರಿ 9ರಂದು ನಡೆಯಲಿರುವ ಮತದಾನವೂ ಸೇರಿದಂತೆ ಫಲಿತಾಂಶ ಮುಂಬರುವ ಮಾರ್ಚ್ 11ರಂದು ಪ್ರಕಟವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com