ಮುಂಬೈ: ವೇಗವಾಗಿ ಬರುತ್ತಿದ್ದ ಕಾರು ಮರವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ 7 ಮಂದಿ ಮೃತಪಟ್ಟು ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಕೊಂಕಣ್ ಪ್ರಾಂತ್ಯದ ರತ್ನಗಿರಿ ಜಿಲ್ಲೆಯ ಮುಂಬೈ-ಗೋವಾ ಹೆದ್ದಾರಿಯಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ.
ಮೃತಪಟ್ಟವರೆಲ್ಲಾ ಮುಂಬೈ ಮೂಲದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಗ್ಗೆ 7.40ರ ಸುಮಾರಿಗೆ ಈ ದುರ್ಘಟನೆ ನಡೆದಿದ್ದು ಕಾರು ಗೋವಾ ಕಡೆಗೆ ಹೋಗುತ್ತಿತ್ತು. ಚಾಲಕ ನಿಯಂತ್ರಣ ತಪ್ಪಿದ್ದರಿಂದ ಕಾರು ರಸ್ತೆಬದಿಯಲ್ಲಿದ್ದ ಮರಕ್ಕೆ ಅಪ್ಪಳಿಸಿತು. ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನೆಲ್ಲಾ ರತ್ನಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರು ಆಸ್ಪತ್ರೆಗೆ ತಲುಪುವ ಮುನ್ನ ಮೃತಪಟ್ಟಿದ್ದಾರೆ.
ಸಾವಿಗೀಡಾದವರನ್ನು ಪ್ರಶಾಂತ್ ಗೌರವ್, ಸಚಿನ್ ಸಾವಂತ್, ಅಕ್ಷಯ್ ಕರೇಕರ್, ಮಯೂರ್ ಪೆಡ್ನೆಕರ್, ನಿಹಾಲ್ ಕೊಲೆಕರ್, ಕೇದಾರ್ ಕೊಲೆಕರ್ ಮತ್ತು ವೈಭವ್ ಮಾನವೆ ಎಂದು ಗುರುತಿಸಲಾಗಿದೆ.