
ನವದೆಹಲಿ: 1997ರ ಉಪಹಾರ್ ಚಿತ್ರ ಮಂದಿರ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಪ್ರಕರಣದ ಪ್ರಮುಖ ಅಪರಾಧಿಯಾಗಿದ್ದ ಗೋಪಾಲ್ ಅನ್ಸಲ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಪ್ರಕರಣ ಸಂಬಂಧ ಇಂದು ಶಿಕ್ಷೆ ಪ್ರಮಾಣ ಪ್ರಕಟಿಸಿದ ಸರ್ವೋಚ್ಛ ನ್ಯಾಯಾಲಯ, ಗೋಪಾಲ್ ಅನ್ಸಾಲ್ ಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೆ ಗೋಪಾಲ್ ಅನ್ಸಾಲ್ ಇನ್ನೊಂದು ತಿಂಗಳು ಅಂದರೆ ನಾಲ್ಕು ವಾರಗಳ ಒಳಗೆ ಪೊಲೀಸರಿಗೆ ಶರಣಾಗಿ ಶಿಕ್ಷೆ ಅನುಭವಿಸಬೇಕು ಎಂದು ಆದೇಶ ಹೊರಡಿಸಿದೆ. ಅಂತೆಯೇ ಗೋಪಾಲ್ ಸಹೋದರ ಸುಶೀಲಸ್ ಅನ್ಸಾಲ್ ಅವರ ಶಿಕ್ಷೆಯಲ್ಲಿ ನ್ಯಾಯಾಲಯ ಕಡಿತಗೊಳಿಸಿದ್ದು, ಈ ಹಿಂದೆ ಇಬ್ಬರಿಗೂ ಹಾಕಲಾಗಿದ್ದ ತಲಾ 30 ಕೋಟಿ ದಂಡದ ಮೊತ್ತದಲ್ಲಿ ನ್ಯಾಯಾಲಯ ಯಾವುದೇ ರೀತಿಯ ಕಡಿತ ಮಾಡಿಲ್ಲ ಎಂದು ತಿಳಿದುಬಂದಿದೆ.
ದೇಶ ಕಂಡ ಅತ್ಯಂತ ಭೀಕರ ದುರಂತಗಳಲ್ಲಿ ಉಪಹಾರ್ ದುರಂತ ಕೂಡ ಒಂದು ಎನ್ನಲಾಗುತ್ತದೆ. ದಕ್ಷಿಣ ದೆಹಲಿಯ ಗ್ರೀನ್ ಪಾರ್ಕ್ ಸಮೀಪವಿರುವ ಉಪಹಾರ್ ಚಿತ್ರಮಂದಿರದಲ್ಲಿ 1997 ಜೂನ್ 13ರಂದು "ಬಾರ್ಡರ್" ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ವೇಳೆಯಲ್ಲಿ ಸಂಭವಿಸಿದ ಅಗ್ನಿ ಅಕಸ್ಮಿಕದಿಂದಾಗಿ ಸುಮಾರು 59 ಮಂದಿ ಅಸುನೀಗಿದ್ದರು. ಅಲ್ಲದೆ ಘಟನೆಯಲ್ಲಿ ಉಸಿರುಗಟ್ಟಿ ಮತ್ತು ಕಾಲ್ತುಳಿತದಿಂದಾಗಿ ಸುಮಾರು 100ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಚಿತ್ರಮಂದಿರದಲ್ಲಿ ಅಗ್ನಿ ನಿಯಂತ್ರಕ ಸಾಧನಗಳಿಲ್ಲದೇ ಇದ್ದುದರಿಂದ ದುರಂತದಲ್ಲಿ ಸಾವಿನ ಸಂಖ್ಯೆ ಹೆಚ್ಚಾಯಿತು ಎಂದು ನ್ಯಾಯಾಲಯದಲ್ಲಿ ಆರೋಪಿಸಲಾಗಿತ್ತು.
Advertisement