ಸಿಎಂ ಆಗಿದ್ದಾಗ ಅತ್ಯಾಚಾರಿಗಳಿಗೆ ಚಿತ್ರಹಿಂಸೆ ಕೊಟ್ಟಿದ್ದೆ: ಉಮಾ ಭಾರತಿ
ಆಗ್ರಾ: ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿರುವ ಕೇಂದ್ರ ಸಚಿವೆ ಉಮಾ ಭಾರತಿ, ತಾವು ಮುಖ್ಯಮಂತ್ರಿಯಾಗಿದ್ದಾಗಿನ ಘಟನೆಗಳನ್ನು ನೆನಪಿಸಿಕೊಂಡಿದ್ದು, ಒಮ್ಮೆ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಿದ್ದಾಗಿ ಹೇಳಿದ್ದಾರೆ.
ಅತ್ಯಾಚಾರಿಗಳಿಗೆ ಸಂತ್ರಸ್ತೆ ಎದುರಲ್ಲೇ ಚಿತ್ರ ಹಿಂಸೆ ನೀಡಬೇಕು. ಕ್ಷಮೆಗಾಗಿ ಗೋಗರೆಯುವವರೆಗೂ ಚಿತ್ರ ಹಿಂಸೆ ನೀಡಬೇಕು ಎಂದಿರುವ ಉಮಾಭಾರತಿ, ತಾವು ಸಿಎಂ ಆಗಿದ್ದಾಗ ಅತ್ಯಾಚಾರಿಗಳಿಗೆ ಅಂಥಹ ಶಿಕ್ಷೆ ನೀಡಿದ್ದೆ ಎಂದು ಹೇಳಿದ್ದಾರೆ.
ಕಳೆದ ವರ್ಷ, ನವದೆಹಲಿಗೆ ತೆರಳುತ್ತಿದ್ದ ಓರ್ವ ತಾಯಿ ಹಾಗೂ ಮಗಳ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣವೊಂದನ್ನು ಉಲ್ಲೇಖಿಸಿ ಮಾತನಾಡಿರುವ ಉಮಾ ಭಾರತಿ, ಆಡಳಿತಾರೂಢ ಪಕ್ಷ ಎಸ್ ಪಿ ಅತ್ಯಾಚಾರಿಗಳು ಜಾಮೀನು ಆಧಾರದಲ್ಲಿ ಬಿಡುಗಡೆಯಾಗುತ್ತಿರುವುದನ್ನು ತಡೆಗಟ್ಟಲು ಯತ್ನಿಸಿಲ್ಲ ಎಂದು ಹೇಳಿದ್ದಾರೆ. ಅತ್ಯಾಚಾರಿಗಳನ್ನು ತಲೆ ಕೆಳಗೆ ಮಾಡಿ ನೇತು ಹಾಕಬೇಕು, ಘಾಸಿಗೊಳಿಸಿ ಗಾಯದ ಮೇಲೆ ಮೆಣಸಿಕಾಯಿಯನ್ನು ಹಾಕಬೇಕು, ಕ್ಷಮೆಗಾಗಿ ಬೇಡಿಕೊಳ್ಳುವವರೆಗೂ ಅತ್ಯಾಚಾರಿಗಳಿಗೆ ಚಿತ್ರಹಿಂಸೆ ಕೊಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ತಾವು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ತಾವು ಈಗ ಹೇಳಿದ್ದನ್ನೆಲ್ಲಾ ಜಾರಿಗೆ ತಂದಿದ್ದಾಗಿ ಉಮಾ ಭಾರತಿ ಹೇಳಿದ್ದಾರೆ.
ನನ್ನ ಸೂಚನೆಗೆ ಪೊಲೀಸ್ ಅಧಿಕಾರಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ರಾಕ್ಷಸರಿಗೆ ಮಾನವ ಹಕ್ಕುಗಳಿರುವುದಿಲ್ಲ, ಅತ್ಯಾಚಾರಿಗಳ ಶಿರಚ್ಛೇಧ ಮಾಡಬೇಕು ಎಂದು ಪೊಲೀಸ್ ಅಧಿಕಾರಿಗೆ ತಿಳಿಸಿದೆ ಎಂದು ಉಮಾ ಭಾರತಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ