ಬಾಲಕನಿಗೆ ಡಿಕ್ಕಿ ಹೊಡೆದ ಕ್ಯಾಬ್: ಗಾಯಾಳು ಹಾಗೂ ತಾಯಿಯೊಂದಿಗೆ 5 ಗಂಟೆ ಸುತ್ತಾಡಿದ ಚಾಲಕ

ನಾಲ್ಕು ವರ್ಷದ ಬಾಲಕನಿಗೆ ಡಿಕ್ಕಿ ಹೊಡೆದ ಕ್ಯಾಬ್ ಚಾಲಕ, ಬಾಲಕನ ತಾಯಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಸುಮಾರು ಐದು ಗಂಟೆಗಳ ಕಾಲ ಕಾರಿನಲ್ಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ನಾಲ್ಕು ವರ್ಷದ ಬಾಲಕನಿಗೆ ಡಿಕ್ಕಿ ಹೊಡೆದ ಕ್ಯಾಬ್ ಚಾಲಕ, ಬಾಲಕನ ತಾಯಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಸುಮಾರು ಐದು ಗಂಟೆಗಳ ಕಾಲ ಕಾರಿನಲ್ಲಿ ಸುತ್ತಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ದೆಹಲಿಯ ಮುಖರ್ಜಿ ನಗರ ಪ್ರದೇಶದಲ್ಲಿ  ಆಟವಾಡುತ್ತಿದ್ದ ರೋಹಿತ್ ಎಂಬ ನಾಲ್ಕು ವರ್ಷದ ಬಾಲಕನಿಗೆ ಕಾರು ರಿವರ್ಸ್ ತೆಗೆಯುವಾಗ ಡ್ರೈವರ್ ರಾಹುಲ್ ಡಿಕ್ಕಿ ಹೊಡೆದಿದ್ದಾನೆ. ಕೂಡಲೇ ಸ್ಥಳೀಯರೆಲ್ಲ ಬಂದು ಗಲಾಟೆ ಮಾಡಿದ್ದಾರೆ. ಈ ವೇಳೆ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿ ಬಾಲಕ ಮತ್ತು ಆತನ ತಾಯಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಾನೆ.

ಸ್ಥಳೀಯ ಆಸ್ಪತ್ರೆಯಲ್ಲಿ ರೋಹಿತ್ ಗೆ ಚಿಕಿತ್ಸೆ ಕೊಡಿಸುವ ಬದಲು ಸುಮಾರು 5 ತಾಸುಗಳ ಕಾಲ ಬಾಲಕ ಮತ್ತು ಆತನ ತಾಯಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಸುತ್ತಾಡಿದ್ದಾನೆ.  ಪೊಲೀಸರಿಗೆ ದೂರು ನೀಡದಂತೆ ಈ ವೇಳೆ ಬೆದರಿಕೆ ಹಾಕಿದ್ದಾನೆ.

ರಾಹುಲ್, ಬಾಲಕ  ರೋಹಿತ್ ಕರೆದುಕೊಂಡು ಆಸ್ಪತ್ರೆಯೊಂದಕ್ಕೆ ತೆರಳಿದ್ದಾನೆ, ಆದರೆ ಅಲ್ಲಿ ದಾಖಲಿಸಿಕೊಳ್ಳಲು ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದಾರೆ. ಮತ್ತೆ ಬೇರೊಂದು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಒಂದರಿಂದ ಮತ್ತೊಂದು ಆಸ್ಪತ್ರೆಗೆ ಕರೆದೊಯ್ದು ಸುಮಾರು 5 ಗಂಟೆ ಸಮಯ ವ್ಯರ್ಥ ಮಾಡಿದ ಎಂದು ಬಾಲಕನ ತಾಯಿ ವಸಂತ ಕುಮಾರಿ ಹೇಳಿದ್ದಾರೆ.

ರೋಹಿತ್ ಸಾವನ್ನಪ್ಪಿದ ಅರ್ಧ ಗಂಟೆ ನಂತರ ವಸಂತಿ ಕುಮಾರಿ ತನ್ನ ಗಂಡನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ಆಕೆಯ ಪತಿ ರೋಹಿತ್ ನನ್ನು ಆಸ್ಪತ್ರೆಗೆ ಕರೆದೊಯ್ದಾಗ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಕಾರಿನಲ್ಲಿ ಕೂರಿಸಿಕೊಂಡಿದ್ದ ರಾಹುಲ್ ಕಾರಿಗೆ ಲಾಕ್ ಮಾಡಿ ರೋಹಿತ್ ನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ, ಪೊಲೀಸರಿಗೆ ದೂರು ನೀಡಿದರೇ ಕಾರಿಗೆ ಬೆಂಕಿ ಹಚ್ಚುವುದಾಗಿ ಬೆದರಿಸುತ್ತಿದ್ದ ಎಂದು ವಸಂತಿ ಕುಮಾರಿ ಪೊಲೀಸರಿಗೆ ದೂರು ನೀಡಿದ್ದಾರೆ, ರೋಹಿತ್ ತಾಯಿ ದೂರಿನ ಅನ್ವಯ ರಾಹುಲ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com