ನೌಕಾಪಡೆಯಲ್ಲೇ "ಮೇಕ್ ಇನ್ ಇಂಡಿಯಾ"ಗೆ ಹಿನ್ನಡೆ; ತೇಜಸ್ ಬದಲಿಗೆ ವಿದೇಶಿ ವಿಮಾನದತ್ತ ಚಿತ್ತ!

ಭಾರಿ ನಿರೀಕ್ಷೆಗಳೊಂದಿಗೆ ತಯಾರಿಗಿದ್ದ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ಭಾರತೀಯ ನೌಕಾಸೇನೆಯ ಗಮನ ಸೆಳೆಯುವಲ್ಲಿ ಮತ್ತೆ ವಿಫಲವಾಗಿದ್ದು, ವಿದೇಶಿ ಲಘು ಯುದ್ಧ ವಿಮಾನಗಳ ಖರೀದಿಗೆ ನೌಕಾಪಡೆ ಮುಂದಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರಿ ನಿರೀಕ್ಷೆಗಳೊಂದಿಗೆ ತಯಾರಿಗಿದ್ದ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ಭಾರತೀಯ ನೌಕಾಸೇನೆಯ ಗಮನ ಸೆಳೆಯುವಲ್ಲಿ ಮತ್ತೆ ವಿಫಲವಾಗಿದ್ದು, ವಿದೇಶಿ ಲಘು ಯುದ್ಧ ವಿಮಾನಗಳ ಖರೀದಿಗೆ ನೌಕಾಪಡೆ ಮುಂದಾಗಿದೆ ಎಂದು ತಿಳಿದುಬಂದಿದೆ.

ನೌಕಾಪಡೆ ಈ ಹಿಂದೆ ತನ್ನ ಯುದ್ಧ ನೌಕೆಗಳಿಗಾಗಿ 57 ಯುದ್ಧ ವಿಮಾನಗಳನ್ನು ಖರೀದಿಸಲು ಮುಂದಾಗಿತ್ತು. ಈ ಯೋಜನೆಗಾಗಿ ಭಾರತ ತೇಜಸ್ ಸೇರಿದಂತೆ ದಕ್ಷಿಣ ಕೊರಿಯಾ, ತೈವಾನ್ ಮತ್ತು ಇತರೆ ಏಷ್ಯಾದ ದೇಶಗಳು ಯುದ್ಧ  ವಿಮಾನ ತಯಾರಿಕೆಗಾಗಿ ಉತ್ಸುಕತೆ ತೋರಿದ್ದವು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾದ "ಮೇಕ್ ಇನ್ ಇಂಡಿಯಾ" ನಿಮಿತ್ತ ದೇಶೀ ನಿರ್ಮಿತ ತೇಜಸ್ ಯುದ್ಧ ವಿಮಾನಗಳಿಗೆ ಮೊದಲ ಆಧ್ಯತೆ  ನೀಡಲಾಗಿತ್ತು.

ಆದರೆ ತೇಜಸ್ ಯುದ್ಧ ವಿಮಾನಗಳ ತೂಕ ಹೆಚ್ಚಾಗಿದ್ದು, ಯುದ್ಧ ನೌಕೆಗಳಲ್ಲಿ ರವಾನಿಸುವಷ್ಟು ಹಗುರವಾಗಿಲ್ಲ ಎಂದು ನೌಕಾಪಡೆ ಅಧಿಕಾರಿಗಳು ತೇಜಸ್ ಯುದ್ಧ ವಿಮಾನವನ್ನು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ  ಮತ್ತೆ ನೌಕಾಪಡೆಯ ಅಧಿಕಾರಿಗಳು ಹೊಸ ಲಘು ಯುದ್ಧ ವಿಮಾನಗಳಿಗಾಗಿ ವಿದೇಶಿ ಕಂಪನಿಗಳತ್ತ ಚಿತ್ತ ಹರಿಸಿವೆ ಎಂದು ಹೇಳಲಾಗುತ್ತಿದೆ.

ಇನ್ನು ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ರಕ್ಷಣಾ ತಜ್ಞರು, ಲಘು ಯುದ್ಧ ವಿಮಾನ ತಯಾರಿಕೆಯಲ್ಲಿ ಭಾರತೀಯ ಸಂಸ್ಥೆಗಳ ಸಾಧನೆ ಗಮನಾರ್ಹವೇ ಆದರೂ, ತಾಂತ್ರಿಕ ವಿಚಾರಗಳಲ್ಲಿ ಈಗಲೂ ಇತರೆ ದೇಶಗಳಿಗೆ ಹೋಲಿಕೆ  ಮಾಡಿದರೆ ಹಿಂದುಳಿದಿದೆ. ಹೀಗಾಗಿ ಭಾರತ ಲಘು ಯುದ್ಧ ವಿಮಾನಗಳ ತಂತ್ರಗಾರಿಕೆಯಲ್ಲಿ ನಿಪುಣತೆ ಸಾಧಿಸಲು ದಶಕಗಳೇ ಬೇಕಾಗುತ್ತದೆ ಎಂದು ಸಿಂಗಾಪುರದ ಸ್ಕೂಲ್ ಆಫ್ ಇಂಟರ್ ನ್ಯಾಷನಲ್ ಸ್ಟಡೀಸ್ ನ ಹಿರಿಯ  ಪ್ರಾಧ್ಯಾಪಕ ರಿಚರ್ಡ್ ಎ ಬಿಟ್ಜಿಂಗರ್ ಹೇಳಿದ್ದಾರೆ.

ಇಂತಹುದೇ ಅಭಿಪ್ರಾಯವನ್ನು ಕೊರಿಯಾ ಏರೋಸ್ಪೇಸ್ ಯೂನಿವರ್ಸಿಟಿ ಪ್ರಾಧ್ಯಾಪಕರಾದ ಚಾಂಗ್ ಯುಂಗ್ ಕ್ಯೂನ್ ಅವರು ವ್ಯಕ್ತಪಡಿಸಿದ್ದು, ಪರಿಪೂರ್ಣ ಲಘು ಯುದ್ಧ ವಿಮಾನ ತಂತ್ರಗಾರಿಕೆಯಲ್ಲಿ ಭಾರತ ನಿಪುಣತೆ ಸಾಧಿಸಲು  ದಶಕಗಳೇ ಬೇಕು ಎಂದು ಹೇಳಿದ್ದಾರೆ.

ಇನ್ನು ಕಳೆದ ಡಿಸೆಂಬರ್ ನೌಕಾಪಡೆಯ ಮುಖ್ಯಸ್ಥ ಸುನಿಲ್ ಲಾಂಬಾ ಅವರು  ತೇಜಸ್ ನೌಕಾಪಡೆಗೆ ಅಗತ್ಯವಿದ್ದ ಸಾಮರ್ಥ್ಯವನ್ನು ಹೊಂದಿಲ್ಲ  ಎಂದು ಹೇಳಿದ್ದರು. ಸಮುದ್ರ ಪ್ರದೇಶದಲ್ಲಿನ ಒತ್ತಡಗಳನ್ನು ತಡೆದುಕೊಂಡು  ಸಂಪೂರ್ಣ ಶಸ್ತ್ರಸಜ್ಜಿತವಾಗಿ ತೇಜಸ್ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿಲ್ಲ ಎಂದು ಹೇಳಿದ್ದರು.  "ತೇಜಸ್ ಸ್ವದೇಶಿ ನಿರ್ಮಿತ ಯುದ್ಧ ವಿಮಾನವೇ ಆದರೂ ನೌಕಾಪಡೆ ನಿಗದಿಪಡಿಸಿದ್ದಕ್ಕಿಂತಲೂ ಹೆಚ್ಚು ತೂಕ ಹೊಂದಿದೆ.  ಹೀಗಾಗಿ ಈ ಯುದ್ಧ ವಿಮಾನವನ್ನು ಸಮರ ನೌಕೆಗಳಲ್ಲಿ ಬಳಕೆ ಮಾಡಲು ಸಾಧ್ಯವಿಲ್ಲ" ಎಂದು ಹೇಳಿದ್ದರು.

ಭಾರತೀಯ ನೌಕಾ ಸೇನೆಯಲ್ಲಿ ಸುಧೀರ್ಘವಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿಯಾಗಿದ್ದ ಮಿಗ್ 21 ಯುದ್ಧ ವಿಮಾನಗಳ ಬದಲಿಗೆ ಹೊಸ ಯುದ್ಧ ವಿಮಾನಗಳನ್ನು ಹೊಂದುವ ಹೆಬ್ಬಯಕೆ ಹೊಂದಿದ್ದ ನೌಕಾಪಡೆಗೆ ತೇಜಸ್ ನಿರಾಸೆ   ಮೂಡಿಸಿದ್ದು, ನೌಕಾಪಡೆ ಬಯಸಿದ್ದ ತಾಂತ್ರಿಕ ಲಕ್ಷಣಗಳನ್ನು ತೇಜಸ್ ಹೊಂದಿಲ್ಲ ಎಂದು ಅಧಿಕಾರಿಗಳು ತೇಜಸ್ ಯುದ್ಧ ವಿಮಾನವನ್ನು ತಿರಸ್ಕರಿಸಿದ್ದಾರೆ. ಮಿಗ್ 21 ಯುದ್ಧ ವಿಮಾನ ನೇಪತ್ಯಕ್ಕೆ ಸರಿದ ಬೆನ್ನಲ್ಲೇ ಸ್ವದೇಶಿ ಲುಘು  ಯುದ್ಧ ವಿಮಾನ ತೇಜಸ್ ಆ ಜಾಗವನ್ನು ತುಂಬಬಹುದು ಎಂದು ಎಣಿಸಲಾಗಿತ್ತು. ಆದರೆ ತೇಜಸ್ ನ ತೂಕದಿಂದಾಗಿ ನೌಕಾಪಡೆ ಅಧಿಕಾರಿಗಳು ಅದನ್ನು ತಿರಸ್ಕರಿಸಿದ್ದಾರೆ. ಇದೇ ಕಾರಣಕ್ಕೆ ನೌಕಾಪಡೆಯ ಅಧಿಕಾರಿಗಳು ಮತ್ತೆರಡು  ಹೊಸ ಮಾದರಿಯ ಯುದ್ಧ ವಿಮಾನಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ಕೇಂದ್ರ ಸರ್ಕಾರದ ಕನಸಿನ ಯೋಜನೆ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಸುಮಾರು 3,650 ಕೋಟಿ ರು ವೆಚ್ಚದಲ್ಲಿ ತೇಜಸ್ ಯುದ್ಧ ವಿಮಾನ ದೇಶೀಯವಾಗಿ ತಯಾರಾಗಿದ್ದು, ಇತ್ತೀಚೆಗೆ ಗೋವಾದಲ್ಲಿ ನಡೆದ ಪರೀಕ್ಷೆಯಲ್ಲಿ ಯಶಸ್ವಿ   ಹಾರಾಟ ನಡೆಸಿತ್ತು. ಇನ್ನು ಕೆಲವೇ ದಿನಗಳಲ್ಲಿ ಬೆಂಗಳೂರಿನಲ್ಲಿ 2017ನೇ ಸಾಲಿನ ಏರೋ ಇಂಡಿಯಾ ನಡೆಯಲಿದ್ದು, ಇಲ್ಲೂ ತೇಜಸ್ ತನ್ನ ಸಾಮರ್ಥ್ಯ ಪ್ರದರ್ಶನ ಮಾಡಲಿದೆ. ಆದರೆ ಇದಕ್ಕೂ ಮೊದಲೇ ನೌಕಾಪಡೆ ತೇಜಸ್ ಗೆ  ಶಾಕ್ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com