ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ನಡುವಿನ ಮೈನಸ್ಸು ತಾರಕ್ಕೇರಿದೆ. ನಗರ ಪಾಲಿಕೆ, ಜಿಲ್ಲಾ ಪರಿಷತ್ ಗಳಿಗೆ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಸಾಮ್ನಾ ಪತ್ರಿಕೆಯನ್ನು ನಿಷೇಧಿಸಬೇಕೆಂದು ಬಿಜೆಪಿ ಮಹಾರಾಷ್ಟ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿರುವುದಕ್ಕೆ ಶಿವಸೇನೆ ತೀವ್ರವಾಗಿ ಕಿಡಿಕಾರಿದೆ.
ಈ ಕುರಿತಂತೆ ಮಾತನಾಡಿರುವ ಶಿವಸೇನೆ ನಾಯಕ ಸಂಜಯ್ ರಾವತ್ ಅವರು, ಈ ರೀತಿಯ ನಿರ್ಧಾರಗಳು ನೇರ ತುರ್ತುಪರಿಸ್ಥಿತಿಯನ್ನು ನಿರ್ಮಾಣ ಮಾಡಲಿದ್ದು, ಜನರು ಬಹಳ ಎಚ್ಚರದಿಂದ ಇರಬೇಕಿದೆ. ಸಾಮ್ನಾ ರಾಷ್ಟ್ರೀಯ ಪ್ರಮುಕ ಪತ್ರಿಕೆಯಾಗಿದ್ದು, ಚುನಾವಣೆಯಲ್ಲಿ ಬಿಜೆಪಿ ಈಗಲೇ ಸೋಲು ಕಂಡಿರುವಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.
ಸಾಮ್ನಾ ನಿಷೇಧಿಸಲು ಬಿಜೆಪಿ ಪ್ರಯತ್ನ ನಡೆಸಿದ್ದೇ ಆದರೆ, ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ. ಸಾಮ್ನಾ ಕೇವಲ ದಿನಪತ್ರಿಕೆಯಷ್ಟೇ ಅಲ್ಲ. ಅದೊಂದು ಆಯುಧವಿದ್ದಂತೆ. ಸಾಮ್ನಾ ನಿಷೇಧಿಸಲು ಬಿಜೆಪಿ ಪ್ರಯತ್ನ ನಡೆಸಿದ್ದೇ ಆದರೆ, ಸಾಮ್ನಾ ಎಂದರೆ ಏನೆಂಬುದನ್ನು ತೋರಿಸಬೇಕಾಗುತ್ತದೆ ಎಂದು ಬಿಜೆಪಿಗೆ ಎಚ್ಚರಿಸಿದ್ದಾರೆ.
ಸಾಮ್ನಾ ನಿಷೇಧ ಕುರಿತಂತೆ ಬಿಜೆಪಿಯ ಚಿಂತನೆ ಅವರಲ್ಲಿರುವ ಮೋಸತನವನ್ನು ಪ್ರತಿಬಿಂಬಿಸುತ್ತದೆ. ಸಾಮ್ನಾ ಯಾವಾಗಲೂ ರಾಷ್ಟ್ರ ವಿರೋಧಿ ಪಡೆಗಳ ವಿರುದ್ಧ ಹೋರಾಟ ನಡೆಸುತ್ತಿರುತ್ತದೆ. ಸಾಮ್ನಾ ಪಟ್ಟಿಯಲ್ಲಿ ಈಗಾಗಲೇ ಪಾಕಿಸ್ತಾನ, ಭಯೋತ್ಪಾದನಾ ತಂಡಗಳು, ಮುಸ್ಲಿಂ, ಕಾಂಗ್ರೆಸ್ ಇದೆ. ಶೀಘ್ರದಲ್ಲಿಯೇ ಬಿಜೆಪಿ ಕೂಡ ಪಟ್ಟಿಗೆ ಸೇರಲಿದೆ ಎಂದಿದ್ದಾರೆ.
ಬಿಜೆಪಿಯ ನಡೆ ನನಗೆ ಆಶ್ಚರ್ಯವನ್ನೇನು ತಂದಿಲ್ಲ. ರಾಷ್ಟ್ರೀಯ ಪ್ರಮುಖ ಪತ್ರಿಕೆಯಾಗಿರುವ ಸಾಮ್ನಾ ಬಗ್ಗೆ ಮಾತನಾಡಬೇಕೆಂದರೆ ಮೊದಲು ಬಿಜೆಪಿ ತನ್ನ ಡಿಎನ್ ಎ ಪರೀಕ್ಷೆ ನಡೆಸಿ ತಮ್ಮ ನರನಾಡಿಯಲ್ಲಿ ಯಾವ ರಕ್ತ ಓಡಾಡುತ್ತಿದೆ ಎಂಬುದನ್ನು ನೋಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
Advertisement