ಬಿಹಾರ ಸರ್ಕಾರದ ಅಧಿಕಾರಿಗಳು ವಿಶ್ವದ ಎಲ್ಲಿಯೂ ಮದ್ಯ ಸೇವನೆ ಮಾಡಬಾರದು: ನಿತೀಶ್ ಕುಮಾರ್ ಹೊಸ ನಿಯಮ

ನ್ಯಾಯಾಂಗ ಸೇವೆ ಸೇರಿದಂತೆ ರಾಜ್ಯ ಸರ್ಕಾರಿ ನೌಕರರಿಗೆ ಸೇವಾ ನಿಯಮ ತಿದ್ದುಪಡಿ ತರುವ ಪ್ರಸ್ತಾವನೆಗೆ...
ಮುಖ್ಯಮಂತ್ರಿ ನಿತೀಶ್ ಕುಮಾರ್
ಮುಖ್ಯಮಂತ್ರಿ ನಿತೀಶ್ ಕುಮಾರ್
ಲಕ್ನೋ: ನ್ಯಾಯಾಂಗ ಸೇವೆ ಸೇರಿದಂತೆ ರಾಜ್ಯ ಸರ್ಕಾರಿ ನೌಕರರಿಗೆ ಸೇವಾ ನಿಯಮ ತಿದ್ದುಪಡಿ ತರುವ ಪ್ರಸ್ತಾವನೆಗೆ ಬಿಹಾರ ಸರ್ಕಾರ ಒಪ್ಪಿಗೆ ನೀಡಿದ್ದು, ಇದರ ಪ್ರಕಾರ ಸರ್ಕಾರಿ ನೌಕರರು ಇನ್ನು ಮುಂದೆ ಯಾವುದೇ ಸ್ಥಳಗಳಲ್ಲಿ ಮದ್ಯ ಹಾಗೂ ಮಾದಕ ವಸ್ತು ಸೇವನೆ ಮಾಡುವಂತಿಲ್ಲ. ಕಳೆದ ವರ್ಷ ರಾಜ್ಯದಲ್ಲಿ ಜಾರಿಗೆ ತಂದ ಮದ್ಯ ಸೇವನೆ ನಿಷೇಧ ನಿಯಮಕ್ಕೆ ಇದು ಪೂರಕವಾಗಿದೆ. 
ಬಿಹಾರ ಸರ್ಕಾರ ಸೇವಕರ ನೀತಿ ನಿಯಮಗಳು- 1976 ಮತ್ತು ಬಿಹಾರ ನ್ಯಾಯಾಂಗ ಅಧಿಕಾರಿಗಳ ನೀತಿ ನಿಯಮಗಳು-2017ಕ್ಕೆ ತಿದ್ದುಪಡಿ ತರಲು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು ಎಂದು ಸಂಪುಟ ಸಮನ್ವಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬ್ರಜೇಶ್ ಮೆಹ್ರೋತ್ರಾ ಸುದ್ದಿಗಾರರಿಗೆ ತಿಳಿಸಿದರು.
ಪ್ರಸ್ತುತ, ಬಿಹಾರ ಸರ್ಕಾರಿ ನೌಕರರ ಸೇವಾ ನಿಯಮ ಪ್ರಕಾರ, ಸರ್ಕಾರಿ ನೌಕರರು ಕರ್ತವ್ಯದಲ್ಲಿರುವಾಗ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಮಲೇರಿಸುವ ಪದಾರ್ಥಗಳು ಮತ್ತು ಮಾದಕ ವಸ್ತುಗಳನ್ನು ಸೇವಿಸುವಂತಿಲ್ಲ.ತಿದ್ದುಪಡಿಯಲ್ಲಿ ಎರಡು ಹೊಸ ಅಂಶಗಳನ್ನು ಪರಿಚಯಿಸಲಾಗಿದೆ, ಮೊದಲನೆಯದಾಗಿ ಯಾವುದೇ ಸರ್ಕಾರಿ ನೌಕರರು ಮಾದಕ ವಸ್ತು ಅಥವಾ ಅಮಲು ಪದಾರ್ಥಗಳನ್ನು ಸೇವಿಸುವಂತಿಲ್ಲ. ಎರಡನೆಯದಾಗಿ, ಸರ್ಕಾರಿ ನೌಕರರು ಎಲ್ಲಿಗೆ ಹೋದರೂ ಕೂಡ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬುದಾಗಿದೆ ಎಂದು ಮೆಹ್ರೊಟ್ರಾ ತಿಳಿಸಿದ್ದಾರೆ.
ರಾಜ್ಯದಿಂದ ಹೊರಗೆ ಹೋಗಿ ಮದ್ಯ ಸೇವನೆ ಮಾಡಿದರೆ ಹೇಗೆ ಗೊತ್ತಾಗುತ್ತದೆ ಎಂದು ಕೇಳಿದ್ದಕ್ಕೆ, ವೈದ್ಯಕೀಯ ಪರೀಕ್ಷೆ, ಸಾಮಾಜಿಕ ಜಾಲತಾಣದಲ್ಲಿ ಭಾವಚಿತ್ರ, ಸ್ಟಿಂಗ್ ಆಪರೇಶನ್ ಮೂಲಕ ಕಂಡುಹಿಡಿಯುತ್ತೇವೆ. ಎಲ್ಲಿಂದಲೇ ನಮಗೆ ಮಾಹಿತಿ ಸಿಕ್ಕರೂ ಅಧಿಕಾರಿಗಳು ತಕ್ಷಣ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.
ನ್ಯಾಯಾಂಗ ಸೇವೆಯಲ್ಲಿರುವವರಿಗೆ ಸಹ ಇದೇ ನಿಯಮ ಅನ್ವಯವಾಗುತ್ತದೆ.ಹೊಸ ಲಿಕ್ಕರ್ ಕಾನೂನು 2016ರ ಪ್ರಕಾರ ನಿಯಮವನ್ನು ತಿದ್ದುಪಡಿ ಮಾಡಲಾಗಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಇಲಾಖೆಯ ನಿಯಮಾನುಸಾರ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಆರಂಭದಲ್ಲಿ ದಂಡ ಹಾಕುವುದರಿಂದ ಹಿಡಿದು ಸೇವೆಯಿಂದ ಅಮಾನತು ಮತ್ತು ಕೊನೆಯದಾಗಿ ಸೇವೆಯಿಂದ ತೆಗೆದುಹಾಕುವ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಹಾರದಲ್ಲಿ ನಿತೀಶ್ ಕುಮಾರ್ ಸರ್ಕಾರ ಕಳೆದ ವರ್ಷ ಏಪ್ರಿಲ್ 5ರಂದು ಮದ್ಯ ನಿಷೇಧ ಜಾರಿಗೊಳಿಸಿತ್ತು. ನಿಯಮ ಉಲ್ಲಂಘಿಸಿದವರಿಗೆ 5ರಿಂದ 10 ವರ್ಷಗಳ ಕಾಲ ಜೈಲು ಶಿಕ್ಷೆ ಕ್ರಮ ತೆಗೆದುಕೊಳ್ಳಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com