ಹುತಾತ್ಮನಾದ ಬಳಿಕ ಪತ್ನಿಗೆ ತಲುಪಿದ ಯೋಧನ ಮದುವೆ ವಾರ್ಷಿಕೋತ್ಸವದ ಉಡುಗೊರೆ!

ಮದುವೆ ವಾರ್ಷಿಕೋತ್ಸವದ ನಿಮಿತ್ತ ಭಾರತೀಯ ಯೋಧನೋರ್ವ ಕಳುಹಿಸಿದ್ದ ಉಡುಗೊರೆಯೊಂದು ಆತ ಉಗ್ರ ಕಾರ್ಯಾಚರಣೆಯಲ್ಲಿ ಹುತಾತ್ಮನಾದ ಬಳಿಕ ಪತ್ನಿಯ ಕೈ ಸೇರಿರುವ ವಿದ್ರಾವಕ ಘಟನೆ ಹರ್ಯಾಣದಲ್ಲಿ ನಡೆದಿದೆ.
ಮೇಜರ್ ಸತೀಶ್ ದಹಿಯಾ
ಮೇಜರ್ ಸತೀಶ್ ದಹಿಯಾ

ಚಂಡೀಘಡ: ಮದುವೆ ವಾರ್ಷಿಕೋತ್ಸವದ ನಿಮಿತ್ತ ಭಾರತೀಯ ಯೋಧನೋರ್ವ ಕಳುಹಿಸಿದ್ದ ಉಡುಗೊರೆಯೊಂದು ಆತ ಉಗ್ರ ಕಾರ್ಯಾಚರಣೆಯಲ್ಲಿ ಹುತಾತ್ಮನಾದ ಬಳಿಕ ಪತ್ನಿಯ ಕೈ ಸೇರಿರುವ ವಿದ್ರಾವಕ ಘಟನೆ ಹರ್ಯಾಣದಲ್ಲಿ ನಡೆದಿದೆ.

ಮೂಲತಃ ಹರ್ಯಾಣದ ಬಿನವಾಡಿ ಮೂಲದವರಾದ ಯೋಧ ಮೇಜರ್ ಸತೀಶ್ ದಹೀಯಾ ಇತ್ತೀಚೆಗೆ ಕಾಶ್ಮೀರದ ಹಂದ್ವಾರದಲ್ಲಿ ನಡೆದ ಉಗ್ರ ಕಾರ್ಯಾಚರಣೆಯಲ್ಲಿ ಯೋಧ ಸತೀಶ್ ದಹಿಯಾ ವೀರಮರಣವನ್ನಪ್ಪಿದ್ದರು.  ಭಾರತೀಯ ಗಡಿಯೊಳಗೆ ನುಸುಳಿದ್ದ ಉಗ್ರರ ವಿರುದ್ಧ ತಮ್ಮ ತಂಡದೊಂದಿಗೆ ಕಾರ್ಯಾಚರಣೆ ನಡೆಸಿದ್ದ ಸತೀಶ್ ದಹಿಯಾ ಎಲ್ಲ ನಾಲ್ಕೂ ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಅಷ್ಟು ಹೊತ್ತಿಗಾಗಲೇ ಉಗ್ರರು  ಸಿಡಿಸಿದ್ದ ಸುಮಾರು ಗುಂಡುಗಳು ಸತೀಶ್ ಅವರ ದೇಹ ಹೊಕ್ಕಿತ್ತು. ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದರು.

ಪ್ರಸ್ತುತ ಸತೀಶ್ ಅವರ ದೇಹ ಅವರ ತವರು ಹರ್ಯಾಣಕ್ಕೆ ರವಾನೆಯಾಗಿದ್ದು, ಅವರ ಕುಟುಂಬಸ್ಥರಿಗೆ ಪಾರ್ಥೀವ ಶರೀರವನ್ನು ಹಸ್ತಾಂತರಿಸಲಾಗಿದೆ.

ಸಾವಿನ ಬಳಿಕ ಪತ್ನಿಯ ತಲುಪಿದ ಯೋಧನ ಮದುವೆ ವಾರ್ಷಿಕೋತ್ಸವದ ಉಡುಗೊರೆ
ಇನ್ನು ಯೋಧ ಸತೀಶ್ ಮತ್ತು ಅವರ ಪತ್ನಿ ಸಜಾತ ದಹಿಯಾ 3 ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದರು. ಇಂದು ಅವರ 3ನೇ ಮದುವೆ ವಾರ್ಷಿಕೋತ್ಸವವಿತ್ತು. ಹೀಗಾಗಿ ಮೊದಲೇ ಯೋಧ ಸತೀಶ್ ತಮ್ಮ ಧರ್ಮ ಪತ್ನಿಗೆ  ಉಡುಗೊರೆಯೊಂದನ್ನು ರವಾನಿಸಿದ್ದರು. ಆದರೆ ಉಡುಗೊರೆ ರವಾನಿಸಿದ್ದ ಸತೀಶ್ ಶವವಾಗಿ ಮನೆಗೆ ಬಂದ ಬಳಿಕವೇ ಆ ಉಡುಗೊರೆ ಅವರ ಪತ್ನಿಯ ಕೈ ಸೇರಿದೆ. ಸತೀಶ್ ಅವರ ಉಡುಗೊರೆ ಬಾಕ್ಸ್ ನಲ್ಲಿ ಒಂದು ಕೇಕ್, ಒಂದು  ಗುಲಾಬಿ, ಕ್ಯಾಂಡಲ್ ಮತ್ತು ಒಂದು ಗ್ರೀಟಿಂಗ್ ಕಾರ್ಡ್ ಇತ್ತು. ಕಾರ್ಡ್ ನಲ್ಲಿ "ಐಲವ್ ಯೂ ಪೂಚಾ (ಸುಜಾತಾ ಅವರನ್ನು ಸತೀಶ್ ಕರೆಯುವ ಶೈಲಿ)...ಯೂ ಆರ್ ಮೈ ಇನ್ಸ್ಪಿರೇಷನ್" ಎಂದು ಬರೆಯಲಾಗಿತ್ತು. ಈ ಬಗ್ಗೆ ಅವರ ಪತ್ನಿ  ಸುಜಾತಾ ಅವರು ಮಾಹಿತಿ ನೀಡಿದ್ದು, ತಮ್ಮ ಮದುವೆ ವಾರ್ಷಿಕೋತ್ಸವ ನಿಮಿತ್ತ ಸತೀಶ್ ಕಳುಹಿಸಿದ್ದ ಉಡುಗೊರೆ ಈಗ ತಲುಪಿದೆ ಎಂದು ತೀವ್ರ ದುಃಖದಿಂದ ಹೇಳಿದ್ದಾರೆ.

ಸಾವಿಗೂ ಅಂಜದೇ ಗುಂಡಿನ ಸುರಿಮಳೆ ನಡುವೆಯೇ ನಾಲ್ಕು ಉಗ್ರರನ್ನು ಮಟ್ಟ ಹಾಕಿದ್ದ ಸತೀಶ್ ಮತ್ತು ತಂಡ
ಇನ್ನು ಹಂದ್ವಾರದಲ್ಲಿ ಉಗ್ರರು ನುಸುಳಿದ್ದಾರೆ ಎಂಬ ಮಾಹಿತಿ ದೊರೆಯುತ್ತಿದ್ದಂತೆಯೇ ತಮ್ಮ ತಂಡದೊಂದಿಗೆ ಸ್ಥಳಕ್ಕೆ ದೌಡಾಯಿಸಿದ ಮೇಜರ್ ಸತೀಶ್, ಕೂಡಲೇ ಕಾರ್ಯಾಚರಣೆ ನಡೆಸಿದರು. ಸುಮಾರು ಹೊತ್ತು ನಡೆದ  ಕಾರ್ಯಾಚರಣೆ ವೇಳೆ ಮೇಜರ್ ಸತೀಶ್ ಉಗ್ರರ ಮೇಲೆ ನಿರಂತರ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ತಮ್ಮ ತಂಡದ ಸದಸ್ಯರಿಗೂ ಗುಂಡೇಟುಗಳಾಗಿತ್ತು. ಈ ಹೊತ್ತಲ್ಲೇ ಪರಾಕ್ರಮ ಪ್ರದರ್ಶಿಸಿದ ಸತೀಶ್ ಉಗ್ರರ  ಗುಂಡುಗಳಿಗೆ ಎದೆಯೊಡ್ಡಿ ನಿಂತರು. ಉಗ್ರರು ಸಿಡಿಸಿದ ಗುಂಡುಗಳು ತಮ್ಮ ದೇಹ ಹೊಕ್ಕುತ್ತಿದ್ದರೂ ಎದೆಗುಂದದ ಸತೀಶ್ ಎಲ್ಲ ನಾಲ್ಕೂ ಉಗ್ರರನ್ನು ಹತ್ಯೆಗೈದರು.

ಆದರೆ ಗುಂಡೇಟಿನಿಂದ ಅವರು ಗಂಭೀರವಾಗಿ ಗಾಯಗೊಂಡರು. ಬಳಿಕ ಅವರನ್ನು ಸೇನಾಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಸತೀಶ್ ಅವರು ಪತ್ನಿ ಮತ್ತು 2 ವರ್ಷದ  ಮಗಳನ್ನು ಅಗಲಿದ್ದಾರೆ. ನಿನ್ನೆ ಸತೀಶ್ ಅವರ ಅಂತ್ಯಕ್ರಿಯೆ ಅವರ ತವರು ಬಾನಿವಾಡಿಯಲ್ಲಿ ನೆರವೇರಿತು. ಈ ವೇಳೆ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com