ಸುಪ್ರೀಂ ಕೋರ್ಟ್ ಗೆ ಐವರು ನೂತನ ನ್ಯಾಯಾಧೀಶರ ನೇಮಕ

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸುಪ್ರೀಂ ಕೋರ್ಟ್ ಗೆ ನ್ಯಾಯಾಧೀಶರ ನೇಮಕ ವಿಚಾರ ಇದೀಗ ಚುರುಕು ಪಡೆದುಕೊಂಡಿದ್ದು, ಐದು ನೂತನ ನ್ಯಾಯಾಧೀಶರ ನೇಮಕದೊಂದಿಗೆ ದೇಶದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರ ಸಂಖ್ಯೆ 28ಕ್ಕೇರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸುಪ್ರೀಂ ಕೋರ್ಟ್ ಗೆ ನ್ಯಾಯಾಧೀಶರ ನೇಮಕ ವಿಚಾರ ಇದೀಗ ಚುರುಕು ಪಡೆದುಕೊಂಡಿದ್ದು, ಐದು ನೂತನ ನ್ಯಾಯಾಧೀಶರ ನೇಮಕದೊಂದಿಗೆ ದೇಶದ ಸರ್ವೋಚ್ಛ  ನ್ಯಾಯಾಲಯದ ನ್ಯಾಯಾಧೀಶರ ಸಂಖ್ಯೆ 28ಕ್ಕೇರಿದೆ.

ಗುರುವಾರ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ನವೀನ್ ಸಿನ್ಹಾ, ಮೋಹನ್ ಎಂ ಶಾಂತನಗೌಡರ್, ದೀಪಕ್ ಗುಪ್ತಾ ಮತ್ತು ಎಸ್ ಅಬ್ದುಲ್ ನಜೀರ್ ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಪ್ರಮಾಣ ವಚನ  ಸ್ವೀಕರಿಸಿದ್ದಾರೆ. ಕೌಲ್ ಅವರು ಮದ್ರಾಸ್ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿದ್ದು, ಸಿನ್ಹಾ ರಾಜಸ್ತಾನ ಹೈಕೋರ್ಟ್, ಶಾಂತನಗೌಡರ್ ಕೇರಳ ಹೈಕೋರ್ಟ್, ಗುಪ್ತಾ ಛತ್ತೀಸ್ ಘಡ ಹೈಕೋರ್ಟ್ ಹಾಗೂ ನಜೀರ್ ಅವರು  ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಅವರಿಗೆ ಭಡ್ತಿ ನೀಡಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕ ಮಾಡಲಾಗಿದೆ.

ಈ ಹಿಂದೆ 2016ರ ಏಪ್ರಿಲ್ ನಲ್ಲಿ ನಡೆದ ರಾಷ್ಟ್ರೀಯ ನ್ಯಾಯಾಂಗ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅಂದಿನ ಮುಖ್ಯ ನ್ಯಾಯಾಧೀಶರಾದ ಟಿಎಸ್ ಠಾಕೂರ್ ಅವರು ಜಡ್ಜ್ ಗಳ ಕೊರತೆ ಕುರಿತಂತೆ ತಮ್ಮ ಅಸಮಾಧಾನವನ್ನು ಹೊರ  ಹಾಕಿದ್ದರು. ಒಂದು ಹಂತದಲ್ಲಿ ಭಾವುಕರಾದ ಠಾಕೂರ್ ಅವರು ನ್ಯಾಯಾಧೀಶರ ಕೊರತೆ ಕುರಿತಂತೆ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ಗಮನ ಸೆಳೆದಿದ್ದರು. ಇದೀಗ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಐದು ಮಂದಿ  ನ್ಯಾಯಾಧೀಶರನ್ನು ನೇಮಕ ಮಾಡಿದೆ.

ಆ ಮೂಲಕ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಕೊರತೆಯ ಸಂಖ್ಯೆ 8ರಿಂದ 3ಕ್ಕೆ ಇಳಿದಿದೆ. ಸುಪ್ರೀಂ ಕೋರ್ಟ್ ಒಟ್ಟು 31 ನ್ಯಾಯಾಧೀಶರ ಅಗತ್ಯವಿದ್ದು, ಪ್ರಸ್ತುತ 28 ನ್ಯಾಯಾಧೀಶರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com