
ಶ್ರೀನಗರ: ಕಾಶ್ಮೀರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಎಚ್ಚರಿಕೆ ನೀಡಿದ 24 ಗಂಟೆಗಳ ಅವಧಿಯಲ್ಲೇ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ.
ಉತ್ತರ ಕಾಶ್ಮೀರದ ಬಾರಾಮುಲ್ಲಾ, ಸೋಪೋರ್, ನೌಹಟ್ಟಾದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಕೆಲ ದುಷ್ಕರ್ಮಿಗಳು ಯೋಧರು ಮತ್ತು ಪೊಲೀಸರತ್ತ ಕಲ್ಲು ತೂರಾಟ ಮಾಡಿದ್ದಾರೆ. ಇನ್ನು ಈ ದುಷ್ಕೃತ್ಯದಲ್ಲಿ ಪಾಕಿಸ್ತಾನೀ ಉಗ್ರರ ಕೈವಾಡದ ಕುರಿತು ಶಂಕೆ ವ್ಯಕ್ತವಾಗುತ್ತಿದ್ದು, ಯೋಧರತ್ತ ಕಲ್ಲು ತೂರಾಟದಲ್ಲಿ ತೊಡಗಿದ್ದವರಲ್ಲಿ ಬಹುತೇಕರು ಸ್ಥಳೀಯರಲ್ಲ ಎಂಬ ಮಾಹಿತಿ ತಿಳಿದುಬಂದಿದೆ. ಸ್ಥಳೀಯರು ತಿಳಿಸಿರುವಂತೆ ಪಾಕ್ ಧ್ವಜ, ಇಸಿಸ್ ಮತ್ತು ಲಷ್ಕರ್ ಇ ತೊಯ್ಬಾ ಧ್ವಜಗಳನ್ನು ಪ್ರದರ್ಶನ ಮಾಡುತ್ತಿದ್ದ ಯುವಕರು ಸ್ಥಳೀಯರಲ್ಲ. ತಾವೆಂದೂ ಅವರನ್ನೂ ಈ ಪ್ರದೇಶದಲ್ಲಿ ನೋಡಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಹೀಗಾಗಿ ಯೋಧರತ್ತ ಕಲ್ಲು ತೂರಾಟ ನಡೆಸಿದ್ದವರಲ್ಲಿ ಬಹುತೇಕರು ಪಾಕಿಸ್ತಾನಿ ಪ್ರಜೆಗಳು ಎಂದು ಶಂಕಿಸಲಾಗುತ್ತಿದೆ.
ಅರ್ಧ ಕಿ.ಮೀ ವರೆಗೂ ಲಾಠಿ ಚಾರ್ಜ್
ಇನ್ನು ನಿನ್ನೆ ದಿಢೀರ್ ಭುಗಿಲೆದ್ದ ಹಿಂಸಾಚಾರದ ವೇಳೆ ಯೋಧರತ್ತ ಕಲ್ಲು ತೂರಾಟ ನಡೆಸುತ್ತಿದ್ದ ಯುವಕರನ್ನು ನಿಯಂತ್ರಿಸಲು ಯೋಧರು ಹಾಗೂ ಪೊಲೀಸರು ನೌಹಟ್ಟಾ ಮುಖ್ಯರಸ್ತೆಯಲ್ಲಿ ಸುಮಾರು ಅರ್ಧ ಕಿ.ಮೀ ವರೆಗೂ ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ಹಲವು ಪ್ರತಿಭಟನಾಕಾರರಿಗೆ ಗಾಯಗಳಾಗಿದ್ದು, ಇದರಿಂದ ಉದ್ರಕ್ತಗೊಂಡ ಮತ್ತೊಂದು ಗುಂಪು ಮತ್ತೊಂದು ಬದಿಯಿಂದ ಕಲ್ಲು ತೂರಾಟ ನಡೆಸಿದೆ. ಈ ವೇಳೆ ಅನಿವಾರ್ಯವಾಗಿ ಯೋಧರು ಅಶ್ರುವಾಯು ಸಿಡಿಸಿದ್ದಲ್ಲದೇ ವಿವಾದಿತ ಪೆಲ್ಲೆಟ್ ಗನ್ ಗಳ ಮೂಲಕ ದಾಳಿ ಮಾಡಿ ಗುಂಪುಚದುರಿಸಲು ಯತ್ನಿಸಿದ್ದಾರೆ.
ಪಾಕ್, ಉಗ್ರ ಸಂಘಟನೆ ಧ್ವಜ ಹಾರಾಟ ಸಾಮಾನ್ಯ!
ಇನ್ನು ಘಟನೆ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸ್ಥಳೀಯ ಭದ್ರತಾ ಅಧಿಕಾರಿಯೊಬ್ಬರು, ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಪಾಕಿಸ್ತಾನ ಧ್ವಜ ಮತ್ತು ಉಗ್ರ ಸಂಘಟನೆಗಳ ಧ್ವಜ ಹಾರಾಟ ಸಾಮಾನ್ಯ. ಪ್ರತೀ ಸಣ್ಣಪುಟ್ಟ ವಿಚಾರಗಳಿಗೂ ಯೋಧರತ್ತ ಕಲ್ಲು ತೂರಾಟ ಮತ್ತು ಪಾಕಿಸ್ತಾನ ಧ್ವಜ ಹಾರಾಟ ಮಾಡುತ್ತಿರುತ್ತಾರೆ. ಪಾಕ್ ಪರ ಘೋಷಣೆ, ಭಾರತ ವಿರೋಧಿ ಘೋಷಣೆ ಮಾಡುತ್ತಿರುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement