ಫತೇಪುರ್(ಉತ್ತರ ಪ್ರದೇಶ): ಸಮಾಜವಾದಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ,ಉತ್ತರ ಪ್ರದೇಶದಲ್ಲಿ ಅಭಿವೃದ್ಧಿಯ ವನವಾಸ ಅಂತ್ಯವಾಗಬೇಕು. ರಾಜ್ಯದ ಜನತೆಗೆ ಸುರಕ್ಷತೆ, ಅಭಿವೃದ್ಧಿ ನೀಡುವ ಪಕ್ಷಕ್ಕೆ ಮತ ಹಾಕಿ ಎಂದು ಮನವಿ ಮಾಡಿಕೊಂಡರು.
ಉತ್ತರ ಪ್ರದೇಶದಲ್ಲಿ ವಿಕಾಸದ ವನವಾಸ ಅಂತ್ಯವಾಗಬೇಕು. ದೇಶ ಅತ್ಯಂತ ವೇಗವಾಗಿ ಪ್ರಗತಿಯತ್ತ ಸಾಗುತ್ತಿದ್ದು, ಉತ್ತರ ಪ್ರದೇಶ ಕೂಡ ಅದೇ ದಾರಿಯಲ್ಲಿ ಮುನ್ನಡೆಯಬೇಕು ಎಂದು ಇಂದು ಫತೇಪುರ್ ದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.
ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, ಕಾನೂನು, ಸುವ್ಯವಸ್ಥೆ ವಿಷಯವನ್ನು ಸಮಾಜವಾದಿ ಪಕ್ಷ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಶಾಂತಿ, ಭದ್ರತೆ ನೀಡುವ ಪಕ್ಷಕ್ಕೆ ಮತ ಹಾಕಿ ಎಂದು ಅವರು ಜನತೆಯಲ್ಲಿ ಮನವಿ ಮಾಡಿಕೊಂಡರು.
ಉತ್ತರ ಪ್ರದೇಶದಲ್ಲಿ ಪೊಲೀಸ್ ವ್ಯವಸ್ಥೆ ಇಷ್ಟೊಂದು ಅದಕ್ಷವಾಗಿರಲು ಕಾರಣವೇನು? ದೂರುಗಳು ಏಕೆ ದಾಖಲಾಗುವುದಿಲ್ಲ. ಇಲ್ಲಿನ ಕೆಲಸದ ಸಂಸ್ಕೃತಿ ಹೇಗಿದೆ ಎಂದು ಕೇಳಿದರು.
ಎಸ್ಪಿ-ಕಾಂಗ್ರೆಸ್ ಮೈತ್ರಿಯ ಬಗ್ಗೆ ಮಾತನಾಡಿದ ಅವರು, ಮುಳುಗುವ ಎರಡು ಹಡಗುಗಳ ನಡುವಿನ ಮೈತ್ರಿ ಇದಾಗಿದೆ ಎಂದು ಟೀಕಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.