
ನವದೆಹಲಿ: ದುಷ್ಕರ್ಮಿಗಳ ಗುಂಡಿಗೆ ದಕ್ಷಿಣ ಸುಡಾನ್ ನಲ್ಲಿ ಗಂಗಾವತಿ ಮೂಲಕ ವ್ಯಕ್ತಿ ಬಲಿಯಾಗಿದ್ದು, ಮೃತ ವ್ಯಕ್ತಿಯ ಕುಟುಂಬಸ್ಥರ ನೆರವಿಗೆ ಸೋಮವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಬಂದಿದ್ದಾರೆ.
ಪ್ರಕರಣ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಸುಡಾನ್ ನಲ್ಲಿ ಮೃತಪಟ್ಟಿರುವ ಭಾರತೀಯ ವ್ಯಕ್ತಿಯ ಕುಟುಂಬಸ್ಥರಿಗೆ ಕೂಡಲೇ ಸಹಾಯ ಮಾಡಿ ದಕ್ಷಿಣ ಸುಡಾನ್ ನಲ್ಲಿರುವ ಭಾರತೀಯ ರಾಯಭಾರಿಗಳಿಗೆ ಸೂಚನೆ ನೀಡಿದ್ದಾರೆ.
ಫೆ.17 ರಂದು ಗಂಗಾವತಿ ಮೂಲದ ಸೈಯದ್ ಫರೂಕ್ ಬಾಷಾ (23) ಎಂಬುವವರು ಮಸೀದಿಗೆ ನಮಾಜ್ ಗೆಂದು ತೆರಳಿದ್ದರು. ನಮಾಜ್ ಮುಗಿಸಿದ ಬಳಿಕ ಫರೂಕ್ ಅವರು ತಮ್ಮ ಕಾರಿನಲ್ಲಿ ಮರಳು ಹೋಗುತ್ತಿದ್ದ ವೇಳೆ ದುಷ್ಕರ್ಮಿಗಳು ಕಾರು ನಿಲ್ಲಿಸುವಂತೆ ಸೂಚಿಸಿದ್ದಾರೆ. ಈ ವೇಳೆ ಕಾರು ಚಾಲಕ ಕಾರನ್ನು ನಿಲ್ಲಿಸದೆಯೇ ಮುಂದೆ ಹೋಗಿದ್ದರು. ನಂತರ ದುಷ್ಕರ್ಮಿಗಳು ಏಕಾಏಕಿ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿ ನಡೆಸಿದ್ದರ ಪರಿಣಾಮ ಸೈಯದ್ ಫರೂಕ್ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.
ಪ್ರಕರಣ ಸಂಬಂಧ ಫರೂಕ್ ಅವರ ಸಂಬಂಧಿ ಸೈಯದ್ ಎಜಾಜ್ ಹುಸೇನ್ ಎಂಬುವವರು ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡುವ ಮೂಲಕ ಮೃತದೇಹವನ್ನು ಭಾರತಕ್ಕೆ ಕರೆತರಲು ಸಹಾಯ ಮಾಡುವಂತೆ ಕೋರಿದ್ದರು. ಈ ಮನವಿಗೆ ಇದೀಗ ಸುಷ್ಮಾ ಸ್ವರಾಜ್ ಅವರು ಸ್ಪಂದನೆ ನೀಡಿದ್ದು, ಕೂಡಲೇ ಮೃತನ ಕುಟುಂಬಕ್ಕೆ ನೆರವಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
Advertisement