ಕಾಶ್ಮೀರಿ ಮುಸ್ಲಿಮರಿಂದ ಶಿವರಾತ್ರಿ ಆಚರಣೆ, ಕಾಶ್ಮೀರ ಪಂಡಿತರು ವಾಪಸ್ ಬರಲು ಆಗ್ರಹ!

ಹಿಂಸಾಚಾರ ಮತ್ತು ಭಯೋತ್ಪಾದನೆಯಿಂದಾಗಿ ಸುದ್ದಿಯಾಗುತ್ತಿದ್ದ ಕಾಶ್ಮೀರ ಇದೀಗ ಸೌಹಾರ್ಧತೆ ವಿಚಾರದಲ್ಲಿ ಸುದ್ದಿಯಾಗಿದ್ದು, ಕಾಶ್ಮೀರಿ ಮುಸ್ಲಿಮರು ಶಿವರಾತ್ರಿ ಆಚರಣೆ ಮಾಡುವ ಮೂಲಕ ಸೌಹಾರ್ಧತೆ ಮೆರೆದಿದ್ದಾರೆ.
ಶಿವಲಿಂಗಕ್ಕೆ ಹಾಲೆರೆಯುತ್ತಿರುವ ಮುಸ್ಲಿಂ ಬಾಂಧವರು
ಶಿವಲಿಂಗಕ್ಕೆ ಹಾಲೆರೆಯುತ್ತಿರುವ ಮುಸ್ಲಿಂ ಬಾಂಧವರು

ಶ್ರೀನಗರ: ಸದಾಕಾಲ ಹಿಂಸಾಚಾರ ಮತ್ತು ಭಯೋತ್ಪಾದನೆಯಿಂದಾಗಿ ಸುದ್ದಿಯಾಗುತ್ತಿದ್ದ ಕಾಶ್ಮೀರ ಇದೀಗ ಸೌಹಾರ್ಧತೆ ವಿಚಾರದಲ್ಲಿ ಸುದ್ದಿಯಾಗಿದ್ದು, ಕಾಶ್ಮೀರಿ ಮುಸ್ಲಿಮರು ಶಿವರಾತ್ರಿ ಆಚರಣೆ ಮಾಡುವ ಮೂಲಕ ಸೌಹಾರ್ಧತೆ  ಮೆರೆದಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದು ವರದಿ ಮಾಡಿರುವಂತೆ, ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿನ ಸ್ಥಳೀಯ ಮುಸ್ಲಿಂ ನಿವಾಸಿಗಳು ಸುಂಬಲ್ ಪಟ್ಟಣದಲ್ಲಿರುವ ಐತಿಹಾಸಿಕ ಶಿವನ ದೇಗುಲಕ್ಕೆ ಆಗಮಿಸಿ ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡುವ ಮೂಲಕ ಶಿವರಾತ್ರಿ ಆಚರಣೆ  ಮಾಡಿದ್ದಾರೆ. ವಿಶೇಷ ಎಂದರೆ ಶಿವರಾತ್ರಿ ದಿನದಂದು ಮುಂಜಾನೆಯೇ ದೇವಾಲಯಕ್ಕೆ ಆಗಮಿಸಿದ ಮುಸ್ಲಿಂ ಬಾಂಧವರು ದೇವಾಲಯದ ಆವರಣದಿಂದ ಹಿಡಿದು ಶಿವಲಿಂಗವನ್ನು ಸ್ವಚ್ಛಗೊಳಿಸಿದ್ದು ಮಾತ್ರವಲ್ಲದೇ ಶಿವಲಿಂಗಕ್ಕೆ  ಹಾಲಿನ ಅಭಿಷೇಕ ಮಾಡಿ ಪೂಜೆ ಮಾಡಿದ್ದಾರೆ. ಅಲ್ಲದೆ ಪ್ರಸಾದದ ರೂಪವಾಗಿ ಅಕ್ರೂಟ್, ಸಿಹಿ ಮತ್ತು ಹಣ್ಣುಗಳನ್ನು ಹಂಚಿ ಸಂಭ್ರಮಿಸಿದ್ದಾರೆ.

ಕಾಶ್ಮೀರಿ ಪಂಡಿತರ ಪಾಲಿಗೆ ಶಿವರಾತ್ರಿ ದೊಡ್ಡ ಹಬ್ಬವಾಗಿದ್ದು, 90 ರದಶಕದಲ್ಲಿ ಅಂದರೆ ಹಿಂಸಾಚಾರಕ್ಕೂ ಮೊದಲು ಇದೇ ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದರು. ಆದರೆ ಹಿಂಸಾಚಾರದ ಬಳಿಕ  ದೇವಾಲಯದ ಮಾರ್ಗ ಆಘೋಷಿತ ನಿರ್ಭಂದಿತ ಪ್ರದೇಶವಾಗಿ ಮಾರ್ಪಟ್ಟಿದ್ದು, ಇಡೀ ವರ್ಷ ಸೈನಿಕರ ಭದ್ರತೆಯಲ್ಲಿರುತ್ತಿತ್ತು. ಆದರೆ ಶಿವರಾತ್ರಿ ದಿನದಂದು ಮಾತ್ರ ಅಲ್ಲಿ ನಿಜಕ್ಕೂ ಸಂಭ್ರಮದ ವಾತಾವರಣ ನೆಲೆಸಿತ್ತು. ಸ್ಥಳೀಯ  ಕಾಂಟ್ರಾಕ್ಟರ್ ಇಮ್ತಿಯಾಜ್ ಅಹ್ಮದ್ ಅವರ ನೇತೃತ್ವದ ಮುಸ್ಲಿಂ ಬಾಂಧವರ ತಂಡ ಶಿವಲಿಂಗಕ್ಕೆ ಹಾಲೆರೆದು ಶಿವರಾತ್ರಿ ಆಚರಣೆ ಮಾಡಿದ್ದಾರೆ.

ಇನ್ನು ಈ ಬಗ್ಗೆ ಹರ್ಷದಿಂದಲೇ ಮಾತನಾಡಿರುವ ಮುಸ್ಲಿಂ ಬಾಂಧವರು ದಶಕಗಳ ಕಾಲ ನಾವು ಮತ್ತು ಕಾಶ್ಮೀರಿ ಪಂಡಿತರು ಅನ್ಯೋನ್ಯವಾಗಿದ್ದೆವು. ಆದರೆ ಕೆಲವರಿಂದಾಗಿ ಇಂದು ಈ ಪರಿಸ್ಥಿತಿ ನಿರ್ಮಾಣವಾಗಿದೆ. ನಾವು ಇಂದಿಗೂ  ಕಾಶ್ಮೀರ ಪಂಡಿತರ ರಕ್ಷಣೆಗೆ ನಿಲ್ಲುತ್ತೇವೆ. ಪಂಡಿತರು ತಮ್ಮ ಮೂಲಸ್ಥಾನಕ್ಕೆ ವಾಪಸ್ ಆಗಬೇಕು ಎಂದು ಆಗ್ರಹಿಸುತ್ತೇವೆ ಎಂದು ಹೇಳಿದ್ದಾರೆ. ಮತ್ತೋರ್ವ ನಿವಾಸಿ ಮಾತನಾಡಿ ಕಾಶ್ಮೀರಿ ಪಂಡಿತರು ಮತ್ತು ನಾವುಗಳು ದೇಹ  ಮತ್ತು ಆತ್ಮಗಳಂತೆ ಒಟ್ಟಾಗಿದ್ದೆವು. ಆದರೆ ಕೆಲ ದುಷ್ಕರ್ಮಿಗಳು ಅವರನ್ನು ನಮ್ಮಿಂದ ದೂರ ಮಾಡಿದ್ದಾರೆ. ತಮ್ಮ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಮ್ಮ ನಡುವೆ ವಿಷದ ಬೀಜ ಬಿತ್ತಿ ಪರಸ್ಪರರು ದೂರಾಗುವಂತೆ  ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com