ನನ್ನ ರಾಷ್ಟ್ರೀಯತೆಯನ್ನು ನಾನು ಸಾಬೀತು ಪಡಿಸುವ ಅಗತ್ಯವಿಲ್ಲ: ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿ

ದೇಶದ ವಿಚಾರ ಬಂದರೆ ನಾನು ಕೂಡ ನನ್ನ ತಂದೆಯಂತೆಯೇ ಬುಲೆಟ್ ಹಿಡಿಯಲು ಹಿಂಜರಿಯುವುದಿಲ್ಲ. ನನ್ನ ರಾಷ್ಟ್ರೀಯತೆಯನ್ನು ನಾನು ಸಾಬೀತು ಪಡಿಸುವ ಅಗತ್ಯವೂ ಇಲ್ಲ ಎಂದು ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿ ಗುರ್​ಮೆಹರ್ ಕೌರ್ ಅವರು ಸೋಮವಾರ ಹೇಳಿದ್ದಾರೆ...
ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿ ಗುರ್​ಮೆಹರ್ ಕೌರ್
ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿ ಗುರ್​ಮೆಹರ್ ಕೌರ್
ಜಲಂಧರ್: ದೇಶದ ವಿಚಾರ ಬಂದರೆ ನಾನು ಕೂಡ ನನ್ನ ತಂದೆಯಂತೆಯೇ ಬುಲೆಟ್ ಹಿಡಿಯಲು ಹಿಂಜರಿಯುವುದಿಲ್ಲ. ನನ್ನ ರಾಷ್ಟ್ರೀಯತೆಯನ್ನು ನಾನು ಸಾಬೀತು ಪಡಿಸುವ ಅಗತ್ಯವೂ ಇಲ್ಲ ಎಂದು ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿ ಗುರ್​ಮೆಹರ್ ಕೌರ್ ಅವರು ಸೋಮವಾರ ಹೇಳಿದ್ದಾರೆ. 
ದೆಹಲಿಯ ರಾಮ್ಜಾಸ್ ಕಾಲೇಜಿನಲ್ಲಿ ನಡೆದ ಘರ್ಷಣೆ ಸಂಬಂಧ ಎಬಿವಿಪಿ ವಿರುದ್ದ ಕಿಡಿಕಾರಿದ್ದ ಗುರ್​ಮೆಹರ್ ಕೌರ್ಅವರು ಎಬಿವಿಪಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೆಲ ಪೋಸ್ಟ್ ಗಳನ್ನು ಹಾಕಿದ್ದರು. ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಟೀಕೆಗಳು ವ್ಯಕ್ತವಾಗತೊಡಗಿವೆ. 
ಈ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿರುವ ಗುರ್​ಮೇಹರ್ ಕೌರ್ ಅವರು, ಎಬಿವಿಪಿ ಕಾನೂನು ಮತ್ತು ಸುವ್ಯವಸ್ಥೆಗೆ ಸವಾಲೆಸೆಯುತ್ತಿದ್ದು, ಮೂಲಭೂತ ಹಕ್ಕಾಗಿರುವ ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಯತ್ನ ಮಾಡುತ್ತಿದೆ. ಹೀಗಾಗಿ ಸಂಘಟನೆಯ ವಿರುದ್ಧ ದನಿ ಎತ್ತುವುದು ನನ್ನ ಅಭಿಯಾನದ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. 
ನನಗೆ ಯಾರ ಮೇಲೂ ಭಯವಿಲ್ಲ. ನಾನು ಯಾರಿಗೂ ತಲೆ ಬಾಗುವುದಿಲ್ಲ. ನನ್ನ ತಂದೆ ದೇಶಕ್ಕಾಗಿ ಬುಲೆಟ್ ಹಿಡಿದಿದ್ದರು. ದೇಶಕ್ಕಾಗಿ ನಾನೂ ಕೂಡ ಬುಲೆಟ್ ಹಿಡಿಯಲು ಸಿದ್ಧಳಿದ್ದೇನೆ. ದೇಶದ ವಿಚಾರ ಬಂದಾಗ ಬುಲೆಟ್ ಹಿಡಿದುಕೊಳ್ಳಲು ನಾನು ಹಿಂಜರಿಯುವುದಿಲ್ಲ. ಹಿಂಸಾಚಾರದ ವಿರುದ್ಧ ವಿದ್ಯಾರ್ಥಿಗಳು ದನಿಯೆತ್ತಬೇಕಿದೆ. ಹಿಂಸಾಚಾರವನ್ನು ಸಹಿಸಲು ಸಾಧ್ಯವಿಲ್ಲ ಎಂದು ಘೋಷಣೆ ಕೂಗಬೇಕಿದೆ. ಎಬಿವಿಪಿ ವಿರುದ್ಧ ತಿರುಗಿ ಬಿದ್ದಿರುವುದಕ್ಕೆ ನನಗೆ ಸಾಕಷ್ಟು ಬೆದರಿಕೆ ಕರೆಗಳು ಬಂದಿದೆ. ಆದರೆ, ಈ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ನಾನು ಸರಿಯಾದ ನಿಲುವಿನಲ್ಲಿ ನಿಂತಿದ್ದೇನೆಂಬ ನಂಬಿಕೆ ನನಗಿದೆ. ನೀವು ಯಾವ ಸಂಘಟನೆ, ಎಷ್ಟರ ಪ್ರಮಾಣದಲ್ಲಿ ಶಕ್ತಿಶಾಲಿಯಾಗಿದ್ದೀರಿ ಎಂಬುದು ನನಗೆ ಬೇಕಿಲ್ಲ. ನಾನು ಹೆದರಬೇಕೆಂದು ಯಾರೊಬ್ಬರೂ ಹೇಳುವಂತಿಲ್ಲ. 
ದೆಹಲಿಯ ರಾಮ್ಜಾಸ್ ಕಾಲೇಜಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆಲ ಯುವತಿಯರ ಮೇಲೆ ದೌರ್ಜನ್ಯವೆಸಗಲಾಗಿದೆ ಎಂಬ ವಿಚಾರ ತಿಳಿದಿತ್ತು. ಇದಲ್ಲದೆ, ಒಬ್ಬ ಮಹಿಳೆಗೆ ಅತ್ಯಾಚಾರ ಬೆದರಿಕೆ ಹಾಕಿರುವ ವಿಚಾರವೂ ತಿಳಿಯಿತು. ನನ್ನ ಪ್ರಕಾರ ಎಬಿವಿಪಿ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಸಮಯ ಬಂದಿದೆ. ವಿದ್ಯಾರ್ಥಿ ಸಂಘಟನೆಗಳು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವುದು, ಕೆಟ್ಟದಾಗಿ ವರ್ತಿಸುವುದು ಸರಿಯಲ್ಲ. 
ಹೀಗಾಗಿಯೇ ನಾವು ಎಬಿವಿಪಿ ವಿರುದ್ಧ ಅಭಿಯಾನವನ್ನು ಆರಂಭಿಸಿದೆವು. ಈ ಮೂಲಕ ನಾನು ದೌರ್ಜನ್ಯ, ಹಿಂಸಾಚಾರವನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ರವಾನಿಸುತ್ತಿದ್ದೇವೆ. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ. ಹಾಗೂ ಎಲ್ಲಾ ವಿದ್ಯಾರ್ಥಿಗಳನ್ನು ಪ್ರೀತಿಸುತ್ತೇನೆ. ವಿದ್ಯಾರ್ಥಿಗಳ ವಾಕ್ ಸ್ವಾತಂತ್ರ್ಯವನ್ನು ನಾನು ಬೆಂಬಲಿಸುತ್ತಿದೆ. 
ಎಬಿವಿಪಿ ವಿರುದ್ದ ತಿರುಗಿ ಬಿದ್ದಿರುವುದಕ್ಕೆ ನನಗೆ ದೇಶವಿರೋಧಿ ಎಂಬ ಪಟ್ಟವನ್ನು ಕಟ್ಟಲಾಗುತ್ತಿದೆ. ನನ್ನ ರಾಷ್ಟ್ರೀಯತೆಯನ್ನು ನಾನು ಸಾಬೀತು ಪಡಿಸುವ ಅಗತ್ಯವಿಲ್ಲ. ಈ ಸಂದರ್ಭದಲ್ಲಿ ಪ್ರಶ್ನೆ ಹಾಕುತ್ತಿರುವವರು ರಾಷ್ಟ್ರೀಯರೇ ಎಂಬ ಪ್ರಶ್ನೆ ಮೂಡುತ್ತದೆ. ನಿಮ್ಮ ಜೊತೆಗಿರುವ ನಾಗರೀಕರಿಗೆ ಬೆದರಿಕೆ ಹಾಕುವವರನ್ನು ರಾಷ್ಟ್ರೀಯವಾದಿಗಳಾಗಲು ಸಾಧ್ಯವಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ. 
ಈ ಹಿಂದೆ ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿ, ಲೇಡಿ ಶ್ರೀ ರಾಮ ಕಾಲೇಜು ವಿದ್ಯಾರ್ಥಿನಿ ಗುರ್​ಮೆಹರ್ ಕೌರ್ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಫೇಸ್​ಬುಕ್​ನಲ್ಲಿ ಪೋಸ್ಟ್ ಹಾಕಿದ್ದರು,
ಕೈ ಬರಹವುಳ್ಳ ಘೋಷ ಪಟ್ಟಿಯನ್ನು ಹಿಡಿದು ನಿಂತಿರುವ ಗುರ್​ಮೆಹರ್ ಕೌರ್, ನಾನು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ. ನಾನು ಎಬಿವಿಪಿಯಿಂದ ಭಯಗೊಂಡಿಲ್ಲ. ನಾನು ಒಂಟಿಯಲ್ಲ. ನನ ಜತೆಗೆ ಭಾರತದ ಪ್ರತಿಯೊಬ್ಬ ವಿದ್ಯಾರ್ಥಿಯೂ ಇದ್ದಾರೆ. ಭಾರತದ ಪ್ರತಿಯೊಬ್ಬ ಪ್ರಜೆಗೂ ಮಾತನಾಡುವ ಹಕ್ಕಿದೆ. ವಾದಿಸುವ ಅವಕಾಶವಿದೆ. ಸರಿ ತಪ್ಪುಗಳನ್ನು ವಿಮರ್ಶಿಸುವ ಸ್ವಾತಂತ್ರವಿದೆ. ಇದನ್ನು ರಾಷ್ಟ್ರ, ಸಂಸ್ಕೃತಿ, ಆಚರಣೆ ಇತ್ಯಾದಿ ಮಾನದಂಡಗಳಡಿ ಹತ್ತಿಕ್ಕುವ ಪ್ರಯತ್ನ ಬೇಡ. ಎಬಿವಿಪಿ ಕಾರ್ಯಕರ್ತರು ತಮ್ಮ ಮೇಲೆ ಕಲ್ಲುಗಳನ್ನು ಎಸೆದು ಗಾಯಗೊಳಿಸಬಹುದು. ಆದರೆ ನಮ್ಮ ತತ್ವಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಹುತಾತ್ಮ ಯೋಧನ ಪುತ್ರಿ ಬರೆದುಕೊಂಡಿದ್ದಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com