ಗುರ್ಮೆಹರ್ ಕೌರ್'ಗೆ ಅತ್ಯಾಚಾರ ಬೆದರಿಕೆ: ಅನಾಮಧೇಯ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲು
ಎಬಿವಿಪಿ ಸಂಘಟನೆ ವಿರುದ್ದ ತಿರುಗಿ ಬಿದ್ದ ಬಳಿಕ ಗುರ್ಮೆಹರ್ ಕೌರ್ ಅವರಿಗೆ ಸಾಕಷ್ಟು ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಲಾಗುತ್ತಿತ್ತು. ಈ ಹಿನ್ನಲೆಯಲ್ಲಿ ದೆಹಲಿ ಪೊಲೀಸರು ಅನಾಮಧೇಯ ವ್ಯಕ್ತಿಗಳ ವಿರುದ್ದ ಎಫ್ಐಆರ್ ದಾಖಲಿಸಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
ನಿನ್ನೆಯಷ್ಟೇ ಆರೋಪ ವ್ಯಕ್ತಪಡಿಸಿದ್ದ ಗುರ್ಮೆಹರ್ ಕೌರ್ ಅವರು, ಎಬಿವಿಪಿ ವಿರುದ್ದ ತಿರುಗಿಬಿದ್ದ ಬಳಿಕ ನನಗೆ ಅತ್ಯಾಚಾರ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿದ್ದರು. ಅಲ್ಲದೆ, ಈ ಕುರಿತಂತೆ ದೆಹಲಿ ಮಹಿಳಾ ಆಯೋಗದ ಮೆಟ್ಟಿಲೇರಿದ್ದರು.
ಪ್ರಕರಣ ಸಂಬಂಧ ಕೂಡಲೇ ಸ್ಪಂದನೆ ನೀಡಿದ್ದ ದೆಹಲಿ ಮಹಿಳಾ ಆಯೋಗ ದೆಹಲಿ ಆಯುಕ್ತರಿಗೆ ಪತ್ರ ಬರೆದು, ಸಂಬಂಧಪಟ್ಟವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು.
ಈ ಹಿನ್ನಲೆಯಲ್ಲಿ ಇದೀಗ ದೆಹಲಿ ಪೊಲೀಸರು ಅನಾಮಧೇಯ ವ್ಯಕ್ತಿಗಳ ವಿರುದ್ಧ ಸಂಬಂಧ ಕಾಯ್ದೆಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಹಿಂದೆ ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿ, ಲೇಡಿ ಶ್ರೀ ರಾಮ ಕಾಲೇಜು ವಿದ್ಯಾರ್ಥಿನಿ ಗುರ್ವೇಹರ್ ಕೌರ್ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದರು,
ಕೈ ಬರಹವುಳ್ಳ ಘೋಷ ಪಟ್ಟಿಯನ್ನು ಹಿಡಿದು ನಿಂತಿರುವ ಗುರ್ಮೆಹರ್ ಕೌರ್, ನಾನು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ. ನಾನು ಎಬಿವಿಪಿಯಿಂದ ಭಯಗೊಂಡಿಲ್ಲ. ನಾನು ಒಂಟಿಯಲ್ಲ. ನನ ಜತೆಗೆ ಭಾರತದ ಪ್ರತಿಯೊಬ್ಬ ವಿದ್ಯಾರ್ಥಿಯೂ ಇದ್ದಾರೆ. ಭಾರತದ ಪ್ರತಿಯೊಬ್ಬ ಪ್ರಜೆಗೂ ಮಾತನಾಡುವ ಹಕ್ಕಿದೆ. ವಾದಿಸುವ ಅವಕಾಶವಿದೆ. ಸರಿ ತಪ್ಪುಗಳನ್ನು ವಿಮರ್ಶಿಸುವ ಸ್ವಾತಂತ್ರವಿದೆ. ಇದನ್ನು ರಾಷ್ಟ್ರ, ಸಂಸ್ಕೃತಿ, ಆಚರಣೆ ಇತ್ಯಾದಿ ಮಾನದಂಡಗಳಡಿ ಹತ್ತಿಕ್ಕುವ ಪ್ರಯತ್ನ ಬೇಡ. ಎಬಿವಿಪಿ ಕಾರ್ಯಕರ್ತರು ತಮ್ಮ ಮೇಲೆ ಕಲ್ಲುಗಳನ್ನು ಎಸೆದು ಗಾಯಗೊಳಿಸಬಹುದು. ಆದರೆ ನಮ್ಮ ತತ್ವಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಹುತಾತ್ಮ ಯೋಧನ ಪುತ್ರಿ ಬರೆದುಕೊಂಡಿದ್ದಳು.