ಜ. 31 ರಿಂದ ಫೆ. 9 ರವರೆಗೆ ಸಂಸತ್ತಿನ ಬಜೆಟ್ ಅಧಿವೇಶನ; ಫೆ.1ಕ್ಕೆ ಸಾಮಾನ್ಯ ಬಜೆಟ್ ಮಂಡನೆ

ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 31ರಿಂದ ಫೆಬ್ರವರಿ 9ರವರೆಗೆ ನಡೆಯಲಿದೆ. ಸಾಮಾನ್ಯ...
ಭಾರತ ಸಂಸತ್ತು
ಭಾರತ ಸಂಸತ್ತು
ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 31ರಿಂದ ಫೆಬ್ರವರಿ 9ರವರೆಗೆ ನಡೆಯಲಿದೆ. ಸಾಮಾನ್ಯ ಬಜೆಟ್ ಫೆಬ್ರವರಿ 1ರಂದು ಮಂಡಿಸಲಾಗುತ್ತಿದೆ. ಸರ್ಕಾರದ ಆರ್ಥಿಕ ಸಮೀಕ್ಷೆ ಜನವರಿ 31ರಂದು ನಡೆಯಲಿದೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಇದೇ 31ರಂದು ಭಾಷಣ ಮಾಡಲಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಇಂದು ಬೆಳಗ್ಗೆ ನಡೆದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಮುಂಬರುವ ಸಂಸತ್ತು ಅಧಿವೇಶನದ ದಿನಾಂಕಗಳನ್ನು ಅಂತಿಮಗೊಳಿಸಲು ಸಭೆ ಕರೆಯಲಾಗಿತ್ತು.
ಕಳೆದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಯಾವುದೇ ಮಹತ್ವಪೂರ್ಣ ಚರ್ಚೆಗಳು, ಕಾಯ್ದೆಗಳ ಮಂಡನೆ, ಅಂಗೀಕಾರವಾಗದೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ನೋಟುಗಳ ಚಲಾವಣೆ ರದ್ದಿನ ವಿಚಾರವಾಗಿ ಗದ್ದಲದಲ್ಲಿಯೇ ಕಳೆದುಹೋದವು. ಎರಡೂ ಸದನಗಳಲ್ಲಿಯೂ ಇದೇ ವಾತಾವರಣ ಕಂಡುಬಂತು.
ವಿಶೇಷಚೇತನರಸ ಹಕ್ಕುಗಳ ಮಸೂದೆ-2014ನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿದ್ದು, ಅದೊಂದೇ ಮಸೂದೆ ಎರಡೂ ಸದನಗಳಲ್ಲಿ ಅನುಮೋದನೆಗೊಂಡಿತ್ತು.
ಈ ಬಾರಿ ಒಟ್ಟಿಗೆ ರೈಲ್ವೆ ಮತ್ತು ಸಾಮಾನ್ಯ ಬಜೆಟ್ ಮಂಡನೆಯಾಗುತ್ತಿರುವುದು ವಿಶೇಷ. ಪ್ರತ್ಯೇಕ ರೈಲ್ವೆ ಬಜೆಟ್ ಮಂಡಿಸುವ 92 ವರ್ಷಗಳ ಪದ್ಧತಿ ಈ ಹಣಕಾಸು ವರ್ಷದಲ್ಲಿ ಕೊನೆಯಾಗಲಿದೆ. ಕೇಂದ್ರ ಸಾಮಾನ್ಯ ಬಜೆಟ್ ಜೊತೆಯಲ್ಲಿಯೇ ರೈಲ್ವೆ ಬಜೆಟ್ ನ್ನು ಕೂಡ ಮಂಡಿಸಬೇಕೆಂಬ ರೈಲ್ವೆ ಸಚಿವ ಸುರೇಶ್ ಪ್ರಭುರವರ ಪ್ರಸ್ತಾವನೆಯನ್ನು ಹಣಕಾಸು ಸಚಿವಾಲಯ ಸ್ವೀಕರಿಸಿದೆ.
ಬಜೆಟ್ ಕ್ಕೂ ಮುನ್ನ ರಾಜ್ಯಗಳ ಸಲಹೆ ಪಡೆಯಲು ಹಣಕಾಸು ಸಚಿವ ಅರುಣ್ ಜೇಟ್ಲಿ ನಾಳೆ ಬಜೆಟ್ ಪೂರ್ವ ಸಲಹಾ ಸಭೆ ನಡೆಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com