ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಮಂಗಳವಾರ ಪ್ರಕಟಿಸಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣಾ ವೇಳಾಪಟ್ಟಿಯ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿರುವ ಆಮ್ ಆದ್ಮಿ ಪಕ್ಷ, ಚುನಾವಣೆಗೆ ಕೆಲವೇ ದಿನಗಳ ಮುನ್ನ ಸಾಮಾನ್ಯ ಬಜೆಟ್ ಮಂಡಿಸುವುದು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ಹೇಳಿದೆ.
ಐದು ರಾಜ್ಯಗಳ ವಿಧಾಸಭೆ ಚುನಾವಣೆಗೆ ಕೆಲವೇ ಕೆಲವು ದಿನ ಬಾಕಿ ಇರುವ ಸಂದರ್ಭದಲ್ಲಿ ಬಜೆಟ್ ಮಂಡಿಸುವುದು ತಪ್ಪು ಎಂದು ಗೋವಾ ಮತ್ತು ಪಂಜಾಬ್ ಎರಡು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಆಮ್ ಆದ್ಮಿ ಪಕ್ಷ ಹೇಳಿದೆ.
ಚುನಾವಣೆ ಆಯೋಗ ವೇಳಾಪಟ್ಟಿ ಪ್ರಕಟಿಸಿದ ಕೆಲವೇ ನಿಮಿಷಗಳಲ್ಲಿ ಟ್ವೀಟ್ ಮಾಡಿರುವ ಎಎಪಿ ವಕ್ತಾರ ಆಶುತೋಶ್ ಅವರು, ಚುನಾವಣೆಗೆ ಕೇವಲ ಮೂರು ದಿನ ಬಾಕಿ ಇರುವಾಗ ಬಜೆಟ್ ಮಂಡಿಸುವುದು ತಪ್ಪು. ಈ ಬಗ್ಗೆ ಆಯೋಗ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದಕ್ಕು ಮುನ್ನ ಎಎಪಿ ಪಂಜಾಬ್ ಮತ್ತು ಗೋವಾದಲ್ಲಿ ಒಂದೇ ದಿನ ಚುನಾವಣೆ ನಡೆಸುವುದು ಬೇಡ ಎಂದು ಮನವಿ ಮಾಡಿತ್ತು. ಆದರೆ ಈ ಎರಡೂ ರಾಜ್ಯಗಳಲ್ಲಿ ಒಂದೇ ದಿನ ಚುನಾವಣೆ ನಡೆಸುವುದಾಗಿ ಇಂದು ಆಯೋಗ ಘೋಷಿಸಿದೆ.
ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಈ ಬಾರಿ ಫೆಬ್ರವರಿ 1ರಂದು ಸಾಮಾನ್ಯ ಬಜೆಟ್ ಮಂಡಿಸುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಅಂದರೆ ಫೆಬ್ರವರಿ 4ರಿಂದ ಐದು ರಾಜ್ಯಗಳ ಚುನಾವಣೆ ನಡೆಯಲಿದೆ.