ಕೇಜ್ರಿವಾಲ್ ಗೆ ಮತ್ತಷ್ಟು ಸಂಕಷ್ಟ: ಆಪ್ ಸಚಿವ ಜೈನ್‌ ವಿರುದ್ಧ ಹವಾಲಾ ತನಿಖೆ

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದ್ದು, ಅವರ ಸಂಪುಟದಲ್ಲಿ ಆರೋಗ್ಯ ಸಚಿವರಾಗಿರುವ...
ಸತ್ಯೇಂದ್ರ ಜೈನ್
ಸತ್ಯೇಂದ್ರ ಜೈನ್
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದ್ದು, ಅವರ ಸಂಪುಟದಲ್ಲಿ ಆರೋಗ್ಯ ಸಚಿವರಾಗಿರುವ ಸತ್ಯೇಂದ್ರ ಕುಮಾರ್‌ ಜೈನ್‌ ಅವರು 17 ಕೋಟಿ ರುಪಾಯಿಗಳ ಹವಾಲಾ ವ್ಯವಹಾರ ನಡೆಸಿರುವ ಆರೋಪದ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಆದಾಯ ತೆರಿಗೆ ಕಾನೂನು ಉಲ್ಲಂಘಿಸಿ 17 ಕೋಟಿ ರು.ಗಳ ಅಕ್ರಮ ಹಣಕಾಸು ವ್ಯವಹಾರ ನಡೆಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈಗಾಗಲೇ ಮೂರು ಬಾರಿ ಜೈನ್‌ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಟೈಮ್ಸ್ ನೌ ವರದಿ ಪ್ರಕಾರ, ಜೈನ್ ಹಾಗೂ ಅವರ ಪತ್ನಿ ನಿಯಂತ್ರಣದ ಇಂಡೋ, ಮೆಟಲ್, ಇಂಪೆಕ್ಸ್ ಪ್ರೈ.ಲಿ, ಅಕಿಂಚನ್ ಡೆವಲಪರ್ಸ್ ಪ್ರೈ.ಲಿ.ಮಾಂಗಲ್ಯಾತನ್ ಪ್ರಾಜೆಕ್ಟ್ ಪ್ರೈ.ಲಿ. ಹಾಗೂ ಪರ್ಯಾಸ್ ಇನ್ಫೋಸೊಲುಷನ್ ಪ್ರೈ.ಲಿ. ಎಂಬ ನಾಲ್ಕು ಖೋಟಾ ಕಂಪೆನಿಗಳ ಮೂಲಕ 2010ರಿಂದ 2016ರ ವರೆಗಿನ ಅವಧಿಯಲ್ಲಿ 16.39 ಕೋಟಿ ರುಪಾಯಿಯನ್ನು ಸುಮಾರು 56 ಖೊಟ್ಟಿ ದಾಖಲೆಪತ್ರಗಳ ಮೂಲಕ ವರ್ಗಾವಣೆ ಮಾಡಿರುವುದನ್ನು ಆದಾಯ ತೆರಿಗೆ ಇಲಾಖೆ ಪತ್ತೆ ಹಚ್ಚಿದೆ.
ಜೈನ್‌ ಅವರು ತಮ್ಮ ನಾಲ್ಕು ಖೊಟ್ಟಿ ಕಂಪೆನಿಗಳ ಮೂಲಕ ಹವಾಲಾ ನಿರ್ವಾಹಕರಾಗಿರುವ ಜೀವೆಂದ್ರ ಮಿಶ್ರಾ, ಅಭಿಷೇಕ್‌ ಛೊಕಾನಿ ಮತ್ತು ಕೋಲ್ಕತಾ ಮೂಲದ ರಾಜೇಂದ್ರ ಬನ್ಸಾಲ್‌ ಅವರಿಗೆ ಸುಮಾರು 17 ಕೋಟಿ ರೂ.ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವುದು ಬಹಿರಂಗವಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಅರವಿಂದ ಕೇಜ್ರಿವಾಲ್‌ ಅವರ ಅತ್ಯಂತ ನಿಕಟವರ್ತಿಯಾಗಿರುವ ಜೈನ್‌ ಅವರು, ತಮ್ಮ ವಿರುದ್ಧದ ಹವಾಲಾ ವಹಿವಾಟಿನ ಆರೋಪಗಳನ್ನು ಅಲ್ಲಗಳೆದು ಇವೆಲ್ಲವೂ ನಿರಾಧಾರ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com