ನವದೆಹಲಿ: ಬಂಧಿತ ಪಾಕಿಸ್ತಾನಿ ಪ್ರಜೆ ಹಾಗೂ ಲಷ್ಕರ್ ಇ ತೊಯ್ಬಾ ಉಗ್ರ ಬಹದೂರ್ ಅಲಿ ವಿರುದ್ಧ ಶುಕ್ರವಾರ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಚಾರ್ಜ್ ಶೀಟ್ ಸಲ್ಲಿಸಿದೆ.
ದೆಹಲಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ದಾಳಿ ಸಂಚು ರೂಪಿಸಿದ್ದ ಆರೋಪದ ಮೇಲೆ ಕಳೆದ ವರ್ಷ ಜುಲೈನಲ್ಲಿ ಕಾಶ್ಮೀರದಲ್ಲಿ ಬಹುದೂರ್ ಅಲಿಯನ್ನು ಬಂಧಿಸಲಾಗಿತ್ತು.
ಕಳೆದ ಆಗಸ್ಟ್ ನಿಂದ ನ್ಯಾಯಾಂಗ ಬಂಧನದಲ್ಲಿರುವ ಅಲಿ ವಿರುದ್ಧ ಎನ್ಐಎ, ಐಪಿಸಿ, ಯುಎಪಿಎ, ಸ್ಫೋಟಕ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಹಾಗೂ ವಿದೇಶಿಗರ ಕಾಯ್ದೆ ಸೇರಿದಂತೆ ವಿವಿಧ ಕಲಂನಲ್ಲಿ ಕೇಸ್ ದಾಖಲಿಸಿದ್ದಾರೆ.
ಮೂಲಗಳ ಪ್ರಕಾರ, ಎನ್ಐಎ ಅಧಿಕಾರಿಗಳು ಇಂದು ಜಿಲ್ಲಾ ನ್ಯಾಯಾಧೀಶ ಅಮರ್ ನಾಥ್ ಅವರಿಗೆ ಉಗ್ರ ಅಲಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದು, ಇತ್ತೀಚಿಗೆ ಕಾಶ್ಮೀರದಲ್ಲಿ ನಡೆದ ಹಿಂಸಾತ್ಮಕ ಘಟನೆಗಳಿಗೆ ಪಾಕಿಸ್ತಾನ ಮೂಲದ ಎಲ್ಇಟಿ ಕಾರಣ. ಅಲ್ಲದೆ ಭಾರತದ ಸೇನೆಯ ವಿರುದ್ಧ ದಾಳಿ ನಡೆಸಲು ಪಾಕಿಸ್ತಾನ ಉಗ್ರರಿಗೆ ಪರೋಕ್ಷವಾಗಿ ಸಹಕಾರ ನೀಡುತ್ತಿದೆ ಎಂದು ಆರೋಪಿಸಿದೆ.