ಚೆನ್ನೈ: ರಾಜ್ಯದ ಜನತೆ ಬಯಸುತ್ತಿರುವುದರಿಂದ ರಾಜಕೀಯಕ್ಕೆ ಸೇರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದು ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸೋದರನ ಪುತ್ರಿ ದೀಪಾ ಜಯಕುಮಾರ್ ಹೇಳಿದ್ದಾರೆ.
ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು,ರಾಜಕೀಯ ಕ್ಷೇತ್ರಕ್ಕೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ರಾಜಕೀಯಕ್ಕೆ ಸೇರಲು ನನ್ನನ್ನು ನಾನು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ದೀಪಾ ಜಯಕುಮಾರ್ ಜಯಲಲಿತಾರ ಸೋದರ ದಿವಂಗತ ಜಯಕುಮಾರ್ ಅವರ ಮಗಳು.
ಜಯಾ ಅವರ ನಿಧನ ನಂತರ ಎಐಎಡಿಎಂಕೆ ಎರಡು ಬಣಗಳಾಗಿ ಒಡೆದಿದ್ದು, ಒಂದು ಬಣ ಸಸಕಲಾ ಅವರನ್ನು ಬೆಂಬಲಿಸುತ್ತಿದ್ದರೆ ಮತ್ತೊಂದು ಬಣ ದೀಪಾರನ್ನು ಬೆಂಬಲಿಸುತ್ತಿದೆ.
ಜಯಲಲಿತಾ ಅವರು ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾಗ ಮತ್ತು ಅಂತ್ಯಕ್ರಿಯೆ ವೇಳೆ ತಮಗೆ ಭೇಟಿಗೆ ಅವಕಾಶ ನೀಡಲಿಲ್ಲ ಎಂದು ದೀಪಾ ಆರೋಪಿಸಿದ್ದರು.