ಛತ್ತೀಸ್ ಗಢದ ಬುಡಕಟ್ಟು ಮಹಿಳೆಯರ ಮೇಲೆ ಪೊಲೀಸ್ ಸಿಬ್ಬಂದಿಯಿಂದ ಲೈಂಗಿಕ ಕಿರುಕುಳ

ಇಲ್ಲಿನ ಬುಡಕಟ್ಟು ಬಸ್ಟರ್ ಪ್ರದೇಶದಲ್ಲಿ 16 ಮಂದಿ ಮಹಿಳೆಯರು ರಾಜ್ಯ ಪೊಲೀಸ್ ಸಿಬ್ಬಂದಿಯಿಂದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬಸ್ಟರ್(ಛತ್ತೀಸ್ ಗಢ): ಇಲ್ಲಿನ ಬುಡಕಟ್ಟು ಬಸ್ಟರ್ ಪ್ರದೇಶದಲ್ಲಿ 16 ಮಂದಿ ಮಹಿಳೆಯರು ರಾಜ್ಯ ಪೊಲೀಸ್ ಸಿಬ್ಬಂದಿಯಿಂದ ಅತ್ಯಾಚಾರ, ಲೈಂಗಿಕ ಮತ್ತು ದೈಹಿಕ ಹಲ್ಲೆಗೊಳಗಾಗಿದ್ದಾರೆ ಎಂದು ರಾಷ್ಟ್ರೀಯ ಮಾನವ ಹಕ್ಕು ಆಯೋಗ ನಡೆಸಿದ ತನಿಖೆಯಲ್ಲಿ ಮೇಲ್ನೋಟಕ್ಕೆ ತಿಳಿದುಬಂದಿದೆ.
ಈ ಕುರಿತು ಆಯೋಗ ರಾಜ್ಯ ಸರ್ಕಾರಕ್ಕೆ ಶೋಕಾಸ್ ನೊಟೀಸ್ ನೀಡಿದ್ದು, ಸರ್ಕಾರ ಯಾಕೆ ಆ ಮಹಿಳೆಯರಿಗೆ 37 ಲಕ್ಷ ರೂಪಾಯಿ ಮಧ್ಯಂತರ ಪರಿಹಾರ ನೀಡಬಾರದು ಎಂದು ಕೇಳಿದೆ.
ಎನ್ಎಚ್ಆರ್ ಸಿ ವರದಿ ಪ್ರಕಾರ, ಪೊಲೀಸ್ ಸಿಬ್ಬಂದಿಯಿಂದ ಕಿರುಕುಳಕ್ಕೊಳಗಾದ 20 ಇತರ ಮಹಿಳೆಯರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಕಾಯುತ್ತಿದೆ.
ಅತ್ಯಾಚಾರಕ್ಕೊಳಗಾದ 8 ಮಹಿಳೆಯರಿಗೆ ತಲಾ 3 ಲಕ್ಷ ರೂಪಾಯಿ ಪರಿಹಾರ, ಲೈಂಗಿಕ ಹಲ್ಲೆಗೊಳಗಾದ 6 ಮಹಿಳೆಯರಿಗೆ ತಲಾ 2 ಲಕ್ಷ ರೂಪಾಯಿ, ದೈಹಿಕ ಹಲ್ಲೆಗೀಡಾದವರಿಗೆ ತಲಾ 50 ಲಕ್ಷ ರೂಪಾಯಿ ಪರಿಹಾರ ವಿತರಿಸಲು ಆಯೋಗ ಶಿಫಾರಸು ಮಾಡಿದೆ.
ಛತ್ತೀಸ್ ಗಢದಲ್ಲಿ ಭದ್ರತಾ ಸಿಬ್ಬಂದಿ ಮಾನವ ಹಕ್ಕುಗಳನ್ನ ಉಲ್ಲಂಘಿಸಿದ್ದು ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ಛತ್ತೀಸ್ ಗಢದ 5 ಗ್ರಾಮಗಳಾದ ಪೆಗ್ಡಪಲ್ಲಿ, ಚಿನ್ನಗೆಲೂರು, ಪೆಡ್ಡಗೆಲೂರು, ಗುಂಡಮ್ ಮತ್ತು ಬುರ್ಗಿಚೆರುಗಳಲ್ಲಿ ಪೊಲೀಸ್ ಸಿಬ್ಬಂದಿ ಹಲ್ಲೆ ನಡೆಸಿರುವುದು ಮಾತ್ರವಲ್ಲದೆ 40ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವರದಿಯಾಗಿತ್ತು. ಈ ವರದಿಯ ಹಿನ್ನೆಲೆಯಲ್ಲಿ ಮಾನವ ಹಕ್ಕು ಆಯೋಗ ಸ್ವತಃ ತನಿಖೆಗೆ ಮುಂದಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com