
ನವದೆಹಲಿ: ಉತ್ತರಪ್ರದೇಶ ರಾಜ್ಯದಲ್ಲಿ ಅಭಿವೃದ್ಧಿ ಎಂಬ ಸೂತ್ರ ಕೆಲಸ ಮಾಡಲಿದ್ದು, ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಮೈತ್ರಿಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಬಿಜೆಪಿ ಭಾನುವಾರ ಹೇಳಿದೆ.
ಉತ್ತರಪ್ರದೇಶ ರಾಜ್ಯದಲ್ಲಿ ಇನ್ನು ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ಆರಂಭಗೊಳ್ಳಲಿದ್ದು, ಈ ಹಿನ್ನಲೆಯಲ್ಲಿ ಉತ್ತರಪ್ರದೇಶದಲ್ಲಿ ರಾಜಕೀಯ ಬೆಳವಣಿಗೆಗಳು ನಡೆಯತೊಡಗಿವೆ. ಚುನಾವಣೆ ಗಮನದಲ್ಲಿಟ್ಟುಕೊಂಡು ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷಗಳು ಮೈತ್ರಿಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬರತೊಡಗಿವೆ.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಸಿದ್ಧಾರ್ಥ್ ನಾಥ್ ಸಿಂಗ್ ಅವರು, ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ ಯಾವುದೇ ನಿಲುವನ್ನಾದರೂ ತೆಗೆದುಕೊಳ್ಳಲಿ. ಆದರೆ, ಅಂತಿಮವಾಗಿ ಸಮಾಜವಾದಿ ಪಕ್ಷಕ್ಕೆ ತನ್ನ ಸೈಕಲ್ ಮುನ್ನಡೆಯುತ್ತಿಲ್ಲ ಎಂಬುದನ್ನು ಕಂಡುಕೊಳ್ಳಲಿದೆ. ಪಂಚಾಯಿತಿ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರಿಗೆ ತಾವಿನ್ನೂ ಐಸಿಯುವಿನಲ್ಲಿದ್ದೇವೆಂಬ ಅರಿವಾಗಿತ್ತು. ಶೀಘ್ರದಲ್ಲಿಯೇ ಸಮಾಜವಾದಿ ಪಕ್ಷಕ್ಕೂ ಅದು ಅರ್ಥವಾಗಲಿದೆ ಎಂದು ಹೇಳಿದ್ದಾರೆ.
ಬಿಜೆಪಿ ಬಿಟ್ಟರೆ ಉತ್ತರಪ್ರದೇಶದಲ್ಲಿ ಬೇರಾವುದೇ ಪಕ್ಷಗಳೂ ಅಭಿವೃದ್ಧಿಯೆಂಬ ಉಡುಗೊರೆ ನೀಡಲು ಸಾಧ್ಯವಿಲ್ಲ. ಹೀಗಾಗಿಯೇ ಅಲ್ಲಿನ ಜನತೆ ಇಂದು ಬಿಜೆಪಿಗೆ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆಂತದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಉತ್ತರಪ್ರದೇಶದಲ್ಲಿ 2500 ಕಿ.ಮೀ ಕಿಸಾನ್ ಮಹಾಯಾತ್ರಾ ಆರಂಭಿಸಿದ್ದ ಸಂದರ್ಭದಲ್ಲಿ 2017ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಬಯಸಿದರೆ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಸಿದ್ಧವಿದೆ ಎಂದು ಹೇಳಿದ್ದರು.
ಇದಾದ ಕೆಲವೇ ದಿನಗಳ ಬಳಿಕ ಅಖಿಲೇಖ್ ಯಾದವ್ ಅವರು ರಾಹುಲ್ ಗಾಂಧಿಯವರನ್ನು ಹೊಗಳಿದ್ದರು. ರಾಹುಲ್ ಗಾಂಧಿಯವರು ಒಳ್ಳೆಯ ಮನುಷ್ಯ. ಬಹಳ ಒಳ್ಳೆಯ ಹುಡುಗ. ಅವರು ಉತ್ತರಪ್ರದೇಶದಲ್ಲಿ ಹೆಚ್ಚು ದಿನ ಇದ್ದರೆ ನಮ್ಮ ಜತೆ ದೋಸ್ತಿ ಆಗಬಹುದು. ಒಳ್ಳೆಯ ಜನ ಒಂದಾದರೆ ತಪ್ಪೇನು ಎಂದು ಕೇಳಿದ್ದರು. ರಾಹುಲ್ ಗಾಂಧಿ ಹಾಗೂ ಅಖಿಲೇಶ್ ಯಾದವ್ ಅವರ ಹೇಳಿಕೆಗಳು ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಮೈತ್ರಿ ಸಾಧಿಸುವ ಲಕ್ಷಣಗಳು ಎಂದು ವಿಶ್ಲೇಷಿಸಲಾಗುತ್ತಿತ್ತು.
Advertisement