ಪಂಜಾಬ್, ಗೋವಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಪ್ ಬಳಿ ಹಣವಿಲ್ಲ: ಅರವಿಂದ್ ಕೇಜ್ರಿವಾಲ್

ಪಂಜಾಬ್ ಮತ್ತು ಗೋವಾ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಮ್ ಆದ್ಮಿ ಪಕ್ಷದ ಬಳಿ ನಯಾ ಪೈಸೆ ಇಲ್ಲ ಎಂದು ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್ (ಸಂಗ್ರಹ ಚಿತ್ರ)
ಅರವಿಂದ್ ಕೇಜ್ರಿವಾಲ್ (ಸಂಗ್ರಹ ಚಿತ್ರ)

ಪಣಜಿ: ಪಂಜಾಬ್ ಮತ್ತು ಗೋವಾ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಮ್ ಆದ್ಮಿ ಪಕ್ಷದ ಬಳಿ ನಯಾ ಪೈಸೆ ಇಲ್ಲ ಎಂದು ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಗೋವಾ ಚುನಾವಣೆ ನಿಮಿತ್ತ ಮಪುಸಾ ಪಟ್ಟಣದಲ್ಲಿ ಆಪ್ ಪಕ್ಷದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಪ್ರಾಮಾಣಿಕ ಪಕ್ಷಕ್ಕೆ ಆರ್ಥಿಕ  ಸಂಕಷ್ಟ ಸಾಮಾನ್ಯ. ಚುನಾವಣೆಯಲ್ಲಿ ಸ್ಪರ್ಧಿಸಲು ನಮ್ಮ  ಬಳಿ ಒಂದು ನಯಾ ಪೈಸೆ ಕೂಡ ಇಲ್ಲ. ಪಕ್ಷದ ಬ್ಯಾಂಕ್ ಖಾತೆ ಬರಿದಾಗಿದ್ದು, ಜನ ಬೆಂಬಲವೊಂದನ್ನೇ ನಾವು ನೆಚ್ಚಿಕೊಂಡಿದ್ದೇವೆ. ಜನರ ಆಶೀರ್ವಾದದಿಂದ ನಾವು ಪಂಜಾಬ್ ಮತ್ತು ಗೋವಾದಲ್ಲಿ ಚುನಾವಣೆಗೆ ಇಳಿದಿದ್ದೇವೆ  ಎಂದು ಹೇಳಿದ್ದಾರೆ.

"ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಮ್ಮದೇ ಸರ್ಕಾರವಿದೆ. ನಾವು ಬೇಕಿದ್ದರೆ ವಾಮಮಾರ್ಗದಲ್ಲಿ ಚುನಾವಣೆಯನ್ನು ಗೆಲ್ಲುವಷ್ಟು ಹಣ ಗಳಿಸಬಹುದಿತ್ತು. ಆದರೆ ಜನ ಆಮ್ ಆದ್ಮಿ ಪಕ್ಷದ ಪ್ರಾಮಾಣಿಕತೆಯನ್ನು ನೆಚ್ಚಿ ಮತ ಹಾಕಿದ್ದಾರೆ.  ಅವರ ನಂಬಿಕೆಗೆ ನಾವು ದ್ರೋಹ ಮಾಡಬಾರದು. ಭ್ರಷ್ಟಾಚಾರದ ಮೂಲಕ ಹಣಗಳಿಸಿ ಚುನಾವಣೆ ಗೆದ್ದಿದ್ದ ಬಿಜೆಪಿ, ಕಾಂಗ್ರೆಸ್ ಹಾಗೂ ಎಂಜಿಪಿ ಪಕ್ಷಗಳ ನಾಶ ಸನ್ನಿಹಿತವಾಗಿದೆ. ಪ್ರಜೆಗಳು ಆಪ್ ಪಕ್ಷವನ್ನು ಬೆಂಬಲಿಸುವ ಮೂಲಕ ಈ  ಪಕ್ಷಗಳ ರಾಜಕೀಯ ಭವಿಷ್ಯವನ್ನು ಅಳಿಸಿಹಾಕಲಿದ್ದಾರೆ. ಗೋವಾದ ಒಟ್ಟು 40 ವಿಧಾನಸಭಾ ಕ್ಷೇತ್ರಗಳಲ್ಲಿ ಆಪ್ ಪಕ್ಷ ಕನಿಷ್ಟ 28-32 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದರು.

ಮುಂಬರುವ ಫೆಬ್ರವರಿ 24ರಂದು ಗೋವಾ ಮತ್ತು ಪಂಜಾಬ್ ರಾಜ್ಯಗಳಲ್ಲಿ ಮತದಾನ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com