ಚೆನ್ನೈ: ಪೊಂಗಲ್ ದಿನದಂದು ನಿಷೇಧಿತ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಆಯೋಜಿಸಲು ಅವಕಾಶ ನೀಡುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸುವ ಬಗ್ಗೆ ಪರಿಶೀಲನೆ ನಡೆಸುವಂತೆ ತಮಿಳುನಾಡು ಸರ್ಕಾರ ಸೋಮವಾರ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.
ಈ ಸಂಬಂಧ ತಮಿಳುನಾಡು ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಸ್ಥಳೀಯ ಜನತೆಯ ಭಾವನೆಯನ್ನು ಅರ್ಥಮಾಡಿಕೊಂಡು ಜಲ್ಲಿಕಟ್ಟು ಆಯೋಜನೆ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ತಮಿಳುನಾಡಿನ ಜನತೆಯ ಪಾಲಿಗೆ ಪೊಂಗಲ್ ಒಂದು ಪ್ರಮುಖ ಹಬ್ಬವಾಗಿದ್ದು, ಜಲ್ಲಿಕಟ್ಟು ಮುಂದಿನ ವಾರ ನಡೆಯುವ ಪೊಂಗಲ್ ಅವಿಭಾಜ್ಯ ಅಂಗವಾಗಿದ್ದು, ಸಮಸ್ಯೆಯ ತೀವ್ರತೆಯನ್ನು ಅರ್ಥಮಾಡಿಕೊಂಡು ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಜಲ್ಲಿಕಟ್ಟು ಕ್ರೀಡೆಗೆ ಅವಕಾಶ ನೀಡಬೇಕು ಎಂದು ತಮಿಳುನಾಡು ಸಿಎಂ ಮನವಿ ಮಾಡಿದ್ದಾರೆ.
ದೇಶಾದ್ಯಂತ ಸಾಂಪ್ರದಾಯಿಕ ವಿವಾದಿತ ಕ್ರೀಡೆ ಜಲ್ಲಿಕಟ್ಟು ಹಾಗೂ ಎತ್ತಿನಗಾಡಿ ಓಟಕ್ಕೆ ನಿಷೇಧ ವಿಧಿಸಿದ್ದ ತನ್ನ 2014ರ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇತ್ತೀಚಿಗೆ ವಜಾಗೊಳಿಸಿತ್ತು. ಅಲ್ಲದೆ ಜಲ್ಲಿಕಟ್ಟು ಮತ್ತು ಎತ್ತಿನಗಾಡಿ ಓಟದ ಸ್ಪರ್ಧೆಗೆ ಎತುಗಳನ್ನು ಬಳಸುವುದು ಕಾನೂನು ಬಾಹಿರ, ಅಸಾಂವಿಧಾನಿಕ ಮತ್ತು ಕ್ರೌರ್ಯ ಎಂದು ಸ್ಪಷ್ಟವಾಗಿ ಹೇಳಿದೆ.