ದೇಶದ ಗಡಿ ಕಾಯುವ ಯೋಧರಿಗೆ ಕಳಪೆ ಆಹಾರ ಪೂರೈಕೆ: ಅಧಿಕಾರಿಗಳ ಕರಾಳ ಮುಖ ಬಿಚ್ಚಿಟ್ಟ ಯೋಧ

ದೇಶಕ್ಕಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟು ಗಡಿ ಕಾಯುವ ಯೋಧರಿಗೆ ಕಳಪೆ ಗುಣಮಟ್ಟದ ಆಹಾರಗಳು ಪೂರೈಕೆಯಾಗುತ್ತಿರುವ ಕರಾಳ ಸತ್ಯವೊಂದು ಇದೀಗ ಬಹಿರಂಗಗೊಂಡಿದೆ...
ದೇಶದ ಗಡಿ ಕಾಯುವ ಯೋಧರಿಗೆ ಕಳಪೆ ಆಹಾರ ಪೂರೈಕೆ: ಅಧಿಕಾರಿಗಳ ಕರಾಳ ಮುಖ ಬಿಚ್ಚಿಟ್ಟ ಯೋಧ
ದೇಶದ ಗಡಿ ಕಾಯುವ ಯೋಧರಿಗೆ ಕಳಪೆ ಆಹಾರ ಪೂರೈಕೆ: ಅಧಿಕಾರಿಗಳ ಕರಾಳ ಮುಖ ಬಿಚ್ಚಿಟ್ಟ ಯೋಧ

ನವದೆಹಲಿ: ದೇಶಕ್ಕಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟು ಗಡಿ ಕಾಯುವ ಯೋಧರಿಗೆ ಕಳಪೆ ಗುಣಮಟ್ಟದ ಆಹಾರಗಳು ಪೂರೈಕೆಯಾಗುತ್ತಿರುವ ಕರಾಳ ಸತ್ಯವೊಂದು ಇದೀಗ ಬಹಿರಂಗಗೊಂಡಿದೆ.

ಎಷ್ಟೇ ಸಮಸ್ಯೆಗಳು ಎದುರಾದರೂ ಎಲ್ಲವನ್ನೂ ಸಹಿಸಿಕೊಂಡು ದೇಶಕ್ಕಾಗಿ ಗಡಿ ಕಾಯುವ ಯೋಧರ ವಾಸ್ತವಿಕ ಪರಿಸ್ಥಿತಿ ಹೇಗಿರುತ್ತದೆ ಎಂಬ ಸತ್ಯವೊಂದನ್ನು ಬಿಎಸ್'ಎಫ್ ರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಗಡಿ ರಕ್ಷಣಾ ಪಡೆಯ 29ನೇ ಬೆಟಾಲಿಯನ್ ನ ಯೋಧ ತೇಜ್ ಬಹದ್ದೂರ್ ಯಾದವ್ ಎಂಬುವವರು ಫೇಸ್ ಬುಕ್ ನಲ್ಲಿ ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿಡಿಯೋಗಳನ್ನು ಅಪ್ ಲೋಡ್ ಮಾಡಿದ್ದು, ತಮಗೆ ನೀಡುತ್ತಿರುವ ಕಳಪೆ ಆಹಾರ ಮತ್ತು ಸೌಲಭ್ಯಗಳ ಕುರಿತಾದ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ದೇಶದ ಜನತೆಗೆ ಶುಭೋದಯಗಳು. ನನ್ನ ನಮನಗಳು. ಈ ಮುಖಾಂತರ ನಾನು ನಿಮ್ಮಲ್ಲೊಂದು ಮನವಿಯೊಂದನ್ನು ಮಾಡಿಕೊಳ್ಳುತ್ತಿದ್ದೇನೆ. ಗಡಿ ರಕ್ಷಣಾ ಪಡೆಯ 29ನೇ ಬೆಟಾಲಿಯನ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಗಡಿಯಲ್ಲಿ ನಾವು ಬೆಳಿಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಗಳವರೆಗೂ 11 ಗಂಟೆಗಳ ಕಾಲ ಸುದೀರ್ಘವಾಗಿ ಕಾರ್ಯನಿರ್ವಹಿಸುತ್ತೇವೆ. ಮಳೆ ಬರಲೀ, ಗಾಳಿ ಬರಲಿ, ಎಷ್ಟೇ ಮಂಜು ಬೀಳಲೀ ಯಾವುದಕ್ಕೂ ಹಿಂಜರಿಯದೆಯೇ ಕಾರ್ಯನಿರ್ವಹಿಸುತ್ತೇವೆ.

ಪ್ರಸ್ತುತ ಇಲ್ಲಿನ ಪರಿಸ್ಥಿತಿ ಹೇಗಿದೆ ಎಂಬುದನ್ನು ಈ ವಿಡಿಯೋ ಮೂಲಕ ನೀವು ನೋಡಬಹುದು. ಇದನ್ನು ನೋಡಿ ನೀವೂ ಖುಷಿ ಕೂಡ ಪಡಬಹುದು. ಆದರೆ, ನಾನು ಎದುರಿಸುತ್ತಿರುವ ಪರಿಸ್ಥಿತಿಯನ್ನು ಮಾಧ್ಯಮಗಳಾಗಲೀ, ರಾಜಕಾರಣಗಳಾಗಲಿ ಕೇಳುವುದಿಲ್ಲ. ಇದಾದ ಬಳಿಕ ನಾನು ನಿಮಗೆ ಇನ್ನೂ ಮೂರು ವಿಡಿಯೋಗಳನ್ನು ಕಳುಹಿಸುತ್ತೇನೆ. ಇದನ್ನು ನೀವು ದೇಶದ ಪ್ರತಿಯೊಂದು ಮಾಧ್ಯಮ ಹಾಗೂ ರಾಜಕಾರಣಿಗಳಿಗೆ ತೋರಿಸಬೇಕೆಂಬುದು ನನ್ನ ಬಯಕೆಯಾಗಿದೆ. ನಮ್ಮ ಹಿರಿಯ ಅಧಿಕಾರಿಗಳು ನಮಗೆ ಯಾವ ರೀತಿಯ ಅನ್ಯಾಯ ಮಾಡುತ್ತಿದ್ದಾರೆಂಬುದು ಆ ವಿಡಿಯೋದಲ್ಲಿ ಸ್ಪಷ್ಟವಾಗುತ್ತದೆ.

ನಾವು ಯಾವುದೇ ಸರ್ಕಾರವನ್ನು ದೂಷಿಸುವುದಿಲ್ಲ. ಯಾಕೆಂದರೆ ಸರ್ಕಾರ ಪ್ರತೀಯೊಂದನ್ನು ನೀಡುತ್ತಿದೆ. ಆದರೆ, ಹಿರಿಯ ಅಧಿಕಾರಿಗಳು ನಮಗೆ ಆ ಸೌಲಭ್ಯಗಳು ತಲುಪಲು ಬಿಡದೆ ಎಲ್ಲವನ್ನೂ ತಮ್ಮಲ್ಲಿಯೇ ಇಟ್ಟುಕೊಳ್ಳುತ್ತಿದ್ದಾರೆ. ಹೀಗಾಗಿ ನಾವು ಸಮಸ್ಯೆ ಎದುರಿಸುತ್ತಿದ್ದರೂ ನಮಗೆ ಆ ಸೌಲಭ್ಯಗಳು ಸಿಗುತ್ತಿಲ್ಲ. ಬಹಳಷ್ಟು ಬಾರಿ ಇಲ್ಲಿರುವ ಯೋಧರು ಊಟವಿಲ್ಲದೆ, ಹಸಿವಿನಿಂದ ಮಲಗಿಕೊಳ್ಳಬೇಕಾಗುತ್ತದೆ. ಬೆಳಿಗ್ಗೆ ಸಿಗುವ ಉಪಹಾರವನ್ನು ನಾನು ನಿಮಗೆ ತೋರಿಸುತ್ತೇನೆ. ನಮಗೆ ಸಿಗುವುದು ಒಂದು ಒಣಗಿದ ಪರೋಟ, ಇದರೊಂದಿಗೆ ತಿನ್ನಲು ಯಾವುದೇ ಪಲ್ಯ ಇರುವುದಿಲ್ಲ. ಮಧ್ಯಾಹ್ನ ಸಿಗುವ ಊಟದ ಕುರಿತಾಗಿ ಹೇಳಬೇಕೆಂದರೆ ಇಲ್ಲಿ ಸಿಗುವ ಸಾರಿನಲ್ಲಿ ಅರಿಶಿನ ಮತ್ತು ಉಪ್ಪು ಬಿಟ್ಟರೆ ಬೇರೇನು ಇರುವುದಿಲ್ಲ.

ಇದನ್ನೇ ನಾವು ದಾಲ್ ಎಂದು ತಿನ್ನಬೇಕು. ಇವೆಲ್ಲವನ್ನೂ ನಾನು ನಿಮಗೆ ತೋರಿಸುತ್ತೇನೆ. ಭಾರತ ಸರ್ಕಾರ ನಮಗೆ ಎಲ್ಲವನ್ನೂ ನೀಡುತ್ತಿದೆ. ಎಲ್ಲವೂ ಗೋದಾಮಿನಲ್ಲಿ ತುಂಬಿರುತ್ತದೆ. ಆದರೆ, ಬಂದ ಆಹಾರ ಪದಾರ್ಥಗಳು ಎಲ್ಲಿ ಹೋಗುತ್ತಿದೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಯಾರು ಅದನ್ನು ಮಾರುತ್ತಿದ್ದಾರೆಂಬುದು ನಮಗೆ ತಿಳಿದಿಲ್ಲ. ಮಾನ್ಯ ಪ್ರಧಾನಮಂತ್ರಿಗಳ ಬಳಿ ನಾನು ಈ ಮೂಲಕ ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ದಯವಿಟ್ಟು ಈ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ.

ಗೆಳೆಯರೇ ಈ ವಿಡಿಯೋ ಹಾಕಿದ ಬಳಿಕ ನಾನು ಇರುತ್ತೇನೋ ಇಲ್ಲವೋ ಗೊತ್ತಿಲ್ಲ. ಏಕೆಂದರೆ ಇದರಲ್ಲಿ ಅಧಿಕಾರಿಗಳ ಬಹುದೊಡ್ಡ ಕೈವಾಡವಿದೆ. ಅವರು ನನಗೆ ಏನನ್ನು ಬೇಕಾದರೂ ಮಾಡಬಹುದು. ಇಲ್ಲಿ ಏನು ಬೇಕಾದರೂ ನಡೆಯುವ ಸಾಧ್ಯತೆಗಳಿವೆ. ಹೀಗಾಗಿ ಈ ವಿಡಿಯೋವನ್ನು ಸಾಧ್ಯವಾದಷ್ಟು ಹೆಚ್ಚು ಶೇರ್ ಮಾಡಿ. ಈ ಮೂಲಕ ಮಾಧ್ಯಮಗಳೂ ಯೋಧರ ಕಷ್ಟವನ್ನು ಜನರಿಗೆ ತೋರಿಸಲಿ. ಮುಂದೆ ಮತ್ತಷ್ಟು ವಿಡಿಯೋಗಳನ್ನು ನಿಮ್ಮ ಮುಂದೆ ಇಡುತ್ತೇನೆ. ಈ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ದೊರೆಯಲಿದೆ ಜೈ ಹಿಂದ್ ಎಂದು ತೇಜ್ ಬಹದ್ದೂರ್ ಯಾದವ್ ಅವರು ಹೇಳಿದ್ದಾರೆ.

ಇದಾದ ಬಳಿಕ ಯೋಧರಿಗೆ ಪೂರೈಕೆ ಮಾಡುತ್ತಿರುವ ಆಹಾರದ ವಾಸ್ತವಿಕತೆ ಕುರಿತ ವಿಡಿಯೋವನ್ನು ಯೋಧ ಅಪ್ ಲೋಡ್ ಮಾಡಿದ್ದು, ಯೋಧರಿಗೆ ನೀಡಲಾಗುತ್ತಿರುವ ದಾಲ್ (ಬೇಳೆಸಾರು) ಹೇಗಿದೆ ಎಂಬುದನ್ನು ತೋರಿಸಿದ್ದಾರೆ. ದಾಲ್ ನಲ್ಲಿ ಕೇವಲ ಅರಿಶಿನ ಮತ್ತು ಉಪ್ಪು ಇರುವುದು ಮಾತ್ರ ಇದ್ದು, ಒಂದು ರೊಟ್ಟಿ ನೀಡುತ್ತಾರೆ. ಇದನ್ನು ತಿಂದು ಒಬ್ಬ ಯೋಧ 11 ಗಂಟೆಗಳ ಕರ್ತವ್ಯ ನಿರ್ವಹಿಸಲು ಸಾಧ್ಯವೇ? ಎಂದು ತೇಜ್ ಬಹದ್ದೂರ್ ಅವರು ಪ್ರಶ್ನಿಸಿದ್ದಾರೆ. ಇಲ್ಲಿನ ಯೋಧರಿಗೆ ಯಾವ ರೀತಿಯ ಆಹಾರ ನೀಡಲಾಗುತ್ತಿದೆ ಎಂಬುದನ್ನು ತೋರಿಸಲು ಮತ್ತು ನಮ್ಮ ಪರಿಸ್ಥಿತಿ ಬಗ್ಗೆ ಸರ್ಕಾರಕ್ಕೆ ಸಂದೇಶ ನೀಡುವ ಸಲುವಾಗಿ ನಾನು ಈ ವಿಡಿಯೋವನ್ನು ಅಪ್ ಲೋಡ್ ಮಾಡಿದ್ದೇನೆಂದು ತೇಜ್ ಅವರು ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com