
ಲಖನೌ: ಸಮಾಜವಾದಿ ಪಕ್ಷದ ಬಿಕ್ಕಟ್ಟು ಮುಂದುವರೆದಿರುವಂತೆಯೇ ಇತ್ತ ಮುಲಾಯಂ ಸಿಂಗ್ ಯಾದವ್ ಅವರು ತಮ್ಮ ಮೊಮ್ಮಕ್ಕಳ ಮೂಲಕ ಪುತ್ರ ಅಖಿಲೇಶ್ ಯಾದವ್ ಅವರಿಗೆ ಸಂದೇಶವೊಂದನ್ನು ರವಾನಿಸಿಸ ಬಿಕ್ಕಟ್ಟು ಶಮನಕ್ಕೆ ಪ್ರಯತ್ನಿಸಿದ್ದಾರೆ.
ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ ಅವರ ಪುತ್ರಿಯರಾದ 15 ವರ್ಷದ ಅದಿತಿ ಹಾಗೂ 10 ವರ್ಷದ ಟೀನಾ ಮೂಲಕ ಅಖಿಲೇಶ್ ಯಾದವ್ ಅವರಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ. ಆ ಮೂಲಕ ಪಕ್ಷದ ಬಿಕ್ಕಟ್ಟು ಶಮನಕ್ಕಾಗಿ ಅಖಿಲೇಶ್ ಯಾದವ್ ಅವರ ಷರತ್ತುಗಳಿಗೆ ಒಪ್ಪಿಗೆ ನೀಡಿರುವ ಕುರಿತು ಪರೋಕ್ಷ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ತಮ್ಮ ಮೊಮ್ಮಕ್ಕಳನ್ನು ಭೇಟಿಯಾಗಿದ್ದ ಮುಲಾಯಂ, ನಿಮ್ಮ ಅಪ್ಪ ಅತೀ ಮೊಂಡ ಎಂದು ಹೇಳಿದ್ದಾರೆ. ಈ ವಿಚಾರವನ್ನು ಟೀನಾ ಮತ್ತು ಅದಿತಿ ತಮ್ಮ ತಂದೆ ಅಖಿಲೇಶ್ ಯಾದವ್ ಅವರಿಗೆ ಹೇಳಿದ್ದು, ಈ ವಿಚಾರ ಕೇಳಿ ನಕ್ಕ ಅಖಿಲೇಶ್ ಹೌದು ನಾನು ಮೊಂಡ ಎಂದು ನಗೆ ಬೀರಿದ್ದಾರೆ.
ಉತ್ತರ ಪ್ರದೇಶ ಚುನಾವಣೆಗೆ ಕೇವಲ 1 ತಿಂಗಳ ಅವಧಿ ಮಾತ್ರ ಇದ್ದು, ಈ ನಿರ್ಣಾಯಕ ಸಮಯದಲ್ಲಿ ಯಾವುದೇ ಕಠಿಣ ನಿರ್ಧಾರ ಕೈಗೊಳ್ಳುವುದರಿಂದ ಪಕ್ಷಕ್ಕೆ ಧಕ್ಕೆಯಾಗುತ್ತದೆ ಎಂದು ಅರಿತಿರುವ ಮುಲಾಯಂ ಸಿಂಗ್ ಯಾದವ್ ಅವರು ಬಂಡಾಯವೆದ್ದ ಶಾಸಕರನ್ನು ಮತ್ತು ಅಖಿಲೇಶ್ ಯಾದವ್ ಬಣವನ್ನು ಸಂತೈಸುವ ಪ್ರಯತ್ನ ಮಾಡುತ್ತಿದ್ದಾರೆ. ಅಂತೆಯೇ ರಾಮ್ ಗೋಪಾಲ್ ಯಾದವ್ ಬಣದೊಂದಿಗೆ ಗುರುತಿಸಿಕೊಂಡಿರುವ ಅಖಿಲೇಶ್ ಯಾದವ್ ತಮ್ಮ ಚಿಕ್ಕಪ್ಪ ಶಿವಪಾಲ್ ಯಾದವ್ ಅವರ ವಿರುದ್ಧ ಬಂಡಾಯವೆದ್ದಿದ್ದರು. ಶಿಪಪಾಲ್ ಯಾದವ್ ಅವರನ್ನು ರಾಜ್ಯ ರಾಜಕೀಯದಿಂದ ದೂರವಿಡುವಂತೆ ಅಖಿಲೇಶ್ ಯಾದವ್ ಈ ಹಿಂದೆ ಮುಲಾಯಂ ಸಿಂಗ್ ಯಾದವ್ ಅವರ ಮುಂದೆ ಷರತ್ತು ವಿಧಿಸಿದ್ದರು.
Advertisement