ನವದೆಹಲಿ: ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್) ಯೋಧ ಜೀತ್ ಸಿಂಗ್ ಅವರು ಸಂಸ್ಥೆಯ ವಿರುದ್ಧ ಯಾವುದೇ ದೂರನ್ನು ವ್ಯಕ್ತಪಡಿಸಿಲ್ಲ, ಬದಲಾಗಿ ಸೌಲಭ್ಯಕ್ಕಾಗಿ ಧ್ವನಿಯೆತ್ತಿದ್ದಾರೆಂದು ಸಿಆರ್'ಪಿಎಫ್ ಗುರುವಾರ ಸ್ಪಷ್ಟನೆ ನೀಡಿದೆ.
ಕೆಲ ದಿನಗಳ ಹಿಂದಷ್ಟೇ ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಅವರು ಸೇನಾ ಅಧಿಕಾರಿಗಳ ವಿರುದ್ದ ಆರೋಪ ವ್ಯಕ್ತಪಡಿಸಿದ್ದರು. ಸೇನೆಯಲ್ಲಿ ಯೋಧರಿಗೆ ಕಳಪೆ ಗುಣಮಟ್ಟದ ಆಹಾರ ನೀಡುತ್ತಿದ್ದು, ಯೋಧರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆಂದು ವಿಡಿಯೋವೊಂದನ್ನು ಹರಿಬಿಟ್ಟಿದ್ದರು. ಇದರ ನಡುವೆಯೇ ಮತ್ತೊಬ್ಬ ಸಿಆರ್'ಪಿಎಫ್ ಯೋಧ ಜೀತ್ ಸಿಂಗ್ ಅವರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಾಕಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.
ಈ ಹಿನ್ನಲೆಯಲ್ಲಿ ಜೀತ್ ಸಿಂಗ್ ಅವರ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡಿ ಸಿಆರ್'ಪಿಎಫ್ ಇಂದು ಮಾಧ್ಯಮ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದೆ.
ಜೀತ್ ಅವರು ಸಂಸ್ಥೆಯ ವಿರುದ್ಧ ಯಾವುದೇ ದೂರನ್ನು ವ್ಯಕ್ತಪಡಿಸಿಲ್ಲ. ಬದಲಾಗಿ ಸೇನಾ ಪಡೆ ಹಾಗೂ ಸಿಆರ್'ಪಿಎಫ್ ನಡುವೆ ಮಾಡುತ್ತಿರುವ ತಾರತಮ್ಯದ ವಿರುದ್ಧ ಧ್ವನಿಯೆತ್ತಿದ್ದಾರೆ ಅಷ್ಟೇ ಎಂದು ಹೇಳಿಕೊಂಡಿದೆ.
Advertisement