
ಕೋಲ್ಕತಾ: ಗಂಗಾಸಾಗರದಲ್ಲಿ ಸಂಭವಿಸಿದ ದುರ್ಘಟನೆಗೆ ಕಾಲ್ತುಳಿತ ಕಾರಣವಲ್ಲ ಎಂದು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಸೋಮವಾರ ಹೇಳಿದೆ.
ನಿನ್ನೆಯಷ್ಟೇ ಗಂಗಾಸಾಗರದಲ್ಲಿ ಕಾಲ್ತುಳಿತ ಸಂಭವಿಸಿದ ಪರಿಣಾಮ 6 ಮಂದಿ ಭಕ್ತರು ಸಾವನ್ನಪ್ಪಿದ್ದರು ಎಂದು ಜಿಲ್ಲಾಧಿಕಾರಿಗಳು ಅಧಿಕೃತವಾಗಿ ಹೇಳಿಕೆ ನೀಡಿದ್ದರು. ಇದೀಗ ರಾಜ್ಯ ಸರ್ಕಾರ ಪ್ರಕರಣ ಸಂಬಂಧ ಸ್ಪಷ್ಟನೆ ನೀಡಿದ್ದು, ದುರ್ಘಟನೆ ಸಂಭವಿಸಿದ್ದು, ಕಾಲ್ತುಳಿತದಿಂದ ಅಲ್ಲ ಎಂದು ಹೇಳಿಕೊಂಡಿದೆ.
ಘಟನೆ ಕುರಿತಂತೆ ಇಂದು ಪ್ರತಿಕ್ರಿಯೆ ನೀಡಿರುವ ಸುಂದರಬನ್ಸ್ ಅಭಿವೃದ್ಧಿ ಸಚಿವ ಮಂತುರಾಮ್ ಫಕೀರಾ ಅವರು, ಗಂಗಾಸಾಗರದಲ್ಲಿ ನಿನ್ನೆ ಸಾವನ್ನಪ್ಪಿದ್ದ 6 ಮಹಿಳೆಯರು ವೃದ್ಧೆಯರಾಗಿದ್ದು, ಕಾಲ್ತುಳಿತದಿಂದ ಅವರು ಸಾವನ್ನಪ್ಪಿರಲಿಲ್ಲ. ಬದಲಾಗಿ ಅನಾರೋಗ್ಯದಿಂದಾಗಿ ಅವರು ಸಾವನ್ನಪ್ಪಿದ್ದರು ಎಂದು ತಿಳಿಸಿದ್ದಾರೆ.
ನದಿಯಲ್ಲಿ ಪವಿತ್ರ ಸ್ನಾನ ಮಾಡಲೆಂದು ನಿನ್ನೆ ಲಕ್ಷಾಂತರ ಭಕ್ತರು ಗಂಗಾಸಾಗರದ ಬಳಿ ಸೇರಿದ್ದರು. ಈ ವೇಳೆ ಸ್ಥಳದಲ್ಲಿ ಜನರ ಸಂಖ್ಯೆ ಹೆಚ್ಚಾಗಿದ್ದರಿಂದ ಕೆಲವರು ಪ್ರಜ್ಞೆ ತಪ್ಪಿದ್ದರು. ಅನಾರೋಗ್ಯಪೀಡತರಾಗಿದ್ದ 6 ಮಹಿಳೆಯರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ವಯಸ್ಸಾದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು ಎಂದು ಅವರು ಹೇಳಿದ್ದಾರೆ.
ಸಾವನ್ನಪ್ಪಿದ್ದ ಮಹಿಳೆಯರಿಗೆ 75 ವರ್ಷಕ್ಕೂ ಹೆಚ್ಚು ವಯಸ್ಸಾಗಿತ್ತು. ಅಲ್ಲದೆ, ದುರ್ಬಲಗೊಂಡಿದ್ದರು. ಹೀಗಾಗಿ ಸಹಜವಾಗಿಯೇ ಸಾವನ್ನಪ್ಪಿದ್ದರು. ಮಹಿಳೆಯರು ಹೃದಯಾಘಾತದಿಂದ ಸಾವನ್ನಪ್ಪಿದ್ದರು ಎಂದು ವೈದ್ಯರೂ ಕೂಡ ಹೇಳಿಕೆ ನೀಡಿದ್ದಾರೆ. ಇನ್ನು ನೀರಿನ ಹರಿವು ಕಡಿಮೆಯಿದ್ದರಿಂದಾಗಿ ದೋಣಿಗಳು ಕೂಡ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ. 8 ಗಂಟೆಗಳ ಕಾಲ ದೋಣಿಗಳು ಕಾರ್ಯನಿರ್ವಹಿಸಿರಲಿಲ್ಲ ಎಂದು ಫಕೀರಾ ಅವರು ತಿಳಿಸಿದ್ದಾರೆ.
ಘಟನೆಗೆ ಕಾಲ್ತುಳಿತವೇ ಕಾರಣ ಎಂಬುದನ್ನು ರಾಜ್ಯ ಸಚಿವರಾದ ಸುಬ್ರತಾ ಮುಖರ್ಜಿ ಹಾಗೂ ಅರೂಪ್ ಬಿಸ್ವಾಲ್ ಕೂಡ ತಿರಸ್ಕರಿಸಿದ್ದಾರೆ.
ರಾಜಧಾನಿ ಕೋಲ್ಕತಾದಿಂದ ಸುಮಾರು 129 ಕಿ.ಮೀ ದೂರದಲ್ಲಿರುವ ಕಪಿಲ ಮುನಿ ಆಶ್ರಮದ ಆವರಣದಲ್ಲಿನ ಗಂಗಾನದಿ ದಡದಲ್ಲಿ ನಿನ್ನೆ ಕಾಲ್ತುಳಿತ ಸಂಭವಿಸಿತ್ತು. ಮಕರ ಸಂಕ್ರಾಂತಿ ನಿಮಿತ್ತ ನಿನ್ನೆ ಲಕ್ಷಾಂತರ ಭಕ್ತರು ನದಿಯಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದ ವೇಳೆ ಕಾಲ್ತುಳಿತ ಸಂಭವಿಸಿ 6 ಮಂದಿ ಸಾವನ್ನಪ್ಪಿದ್ದರು ಎಂದು ನಿನ್ನೆಯಷ್ಟೇ ಅಲ್ಲಿನ ಜಿಲ್ಲಾಧಿಕಾರಿಗಳು ಹೇಳಿಕೆ ನೀಡಿದ್ದರು.
Advertisement