
ಲಖನೌ: ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿಯವರು ತಾವು ದಲಿತರ ಮಗಳು ಎಂದು ಹೇಳಿಕೊಳ್ಳುತ್ತಾರೆ. ಆದರೆ, ಅವರು ದಲಿತರ ಮಗಳಲ್ಲ. ಕೇವಲ ಸಂಪತ್ತಿನ ಪುತ್ರಿಯಷ್ಟೇ ಎಂದು ಬಿಜೆಪಿ ಸೋಮವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಬಿಜೆಪಿ ಸಂಸದ ಜಗ್ದಾಂಬಿಕಾ ಪಾಲ್ ಅವರು, ಮಾಯಾವತಿಯವರು ದಲಿತರ ಮಗಳಲ್ಲ, ಸಂಪತ್ತಿನ ಪುತ್ರಿ ಎಂಬುದು ಉತ್ತರಪ್ರದೇಶಕ್ಕೆ ಗೊತ್ತಿದೆ. ಚುನಾವಣೆಗೂ ಮುನ್ನ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿರುವ ಮಾಯಾವತಿಯವರು ಮತದಾರರ ಅನುಕಂಪ ಪಡೆದುಕೊಳ್ಳಲು ಯತ್ನ ನಡೆಸುತ್ತಿದ್ದಾರೆಂದು ಹೇಳಿದ್ದಾರೆ.
ಈ ಹಿಂದೆ ಬಿಜೆಪಿ ವಿರುದ್ಧ ಕಿಡಿಕಾರಿದ್ದ ಮಾಯಾವತಿಯವರು ನೋಟು ಅಮಾನ್ಯ ನಿರ್ಧಾರ ಪ್ರಕಟಿಸಿ 50 ದಿನಗಳು ಕಳೆದರೂ, ಈ ವರೆಗೂ ಎಷ್ಟು ಕಪ್ಪುಹಣ ವಾಪಸ್ ಪಡೆಯಲಾಗಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಬಹಿರಂಗಪಡಿಸಿಲ್ಲ. ಒಳ್ಳೆಯ ದಿನಗಳ ಭರವಸೆ ನೀಡಿದ್ದ ಬಿಜೆಪಿ ಈಗ ಉತ್ತರ ಪ್ರದೇಶದ್ಲಲಿ ಕೆಟ್ಟದಿನಗಳನ್ನು ಎದುರಿಸಲು ಸಿದ್ಧಗೊಳ್ಳಬೇಕಿದೆ. ಬಿಎಸ್ ಪಿ ಪಕ್ಷವೊಂದೇ ಬಿಜೆಪಿಯನ್ನು ಅಧಿಕಾರದಿಂದ, ಉತ್ತರ ಪ್ರದೇಶದಿಂದ ದೂರವಿಡಲು ಸಾಮರ್ಥ್ಯ ಹೊಂದಿದೆ ಎಂದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ವರ್ಚಸ್ಸು ಸಂಪೂರ್ಣ ಕುಗ್ಗಿದೆ. ಬಿಜೆಪಿ ಹಾಗೂ ಸಮಾಜವಾದಿ ಪಕ್ಷ ಒಪ್ಪಂದ ಮಾಡಿಕೊಂಡಿವೆ ಎಂದು ಆರೋಪಿಸಿದ್ದರು.
Advertisement