
ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಬಳಿಕ ಭುಗಿಲೆದ್ದಿದ್ದ ಹಿಂಸಾಚಾರದ ಹಿನ್ನಲೆಯಲ್ಲಿ ಕಾಶ್ಮೀರದಲ್ಲಿ ನಿಯೋಜಿಸಲಾಗಿದ್ದ ಸಿಆರ್ ಪಿಎಫ್ ನ ಹೆಚ್ಚುವರಿ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಾಗುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಉಗ್ರ ಬುರ್ಹಾನ್ ವಾನಿ ಹತ್ಯೆ ಬಳಿಕ ಸತತ 5 ತಿಂಗಳ ಕಾಲ ಕಾಶ್ಮೀರದಲ್ಲಿ ಹಿಂಸಾಚಾರ ತಾಂಡವವಾಡಿತ್ತು. ಆದರೆ ಪ್ರಸ್ತುತ ಕಣಿವೆ ರಾಜ್ಯದಲ್ಲಿ ಕ್ರಮೇಣ ಶಾಂತಿ ನೆಲೆಸುತ್ತಿರುವ ಹಿನ್ನಲೆಯಲ್ಲಿ ಅಲ್ಲಿ ನಿಯೋಜಿಸಲಾಗಿದ್ದ ಹೆಚ್ಚುವರಿ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಾಗುತ್ತಿದೆ ಎಂದು ಹಿರಿಯ ಸೇನಾಧಿಕಾರಿ ಹಾಗೂ ಸಿಆರ್ ಪಿಎಫ್ ನ ವಕ್ತಾರ ರಾಜೇಶ್ ಯಾದವ್ ತಿಳಿಸಿದ್ದಾರೆ.
ಉಗ್ರ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ಪ್ರತ್ಯೇಕತಾ ವಾದಿಗಳ ಕುಮ್ಮಕ್ಕಿನಿಂದ ಭಾರಿ ಪ್ರಮಾಣದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಹೀಗಾಗಿ ಕಾನೂನು ಮತ್ತು ಸುವ್ಯವಸ್ಥೆ ರಕ್ಷಿಸಲು ಕಣಿವೆ ರಾಜ್ಯಕ್ಕೆ ಹೆಚ್ಚುವರಿಯಾಗಿ 102 ಸಿಆರ್ ಪಿಎಫ್ ಕಂಪನಿಗಳನ್ನು ಕರೆಸಿಕೊಳ್ಳಲಾಗಿತ್ತು. (ಸಿಆರ್ ಪಿಎಫ್ ನ ಒಂದು ಕಂಪನಿಯಲ್ಲಿ ಅಧಿಕಾರಿಗಳು ಕಮಾಂಡರ್ ಗಳು ಸೇರಿದಂತೆ ಒಟ್ಟು 135 ಯೋಧರು ಇರುತ್ತಾರೆ) ಕಣಿವೆ ರಾಜ್ಯದ 10 ಜಿಲ್ಲೆಗಳಲ್ಲಿ ಈ ಕಂಪನಿಗಳನ್ನು ಕಾನೂನು ಸುವ್ಯವಸ್ಥೆಗಾಗಿ ನಿಯೋಜಿಸಲಾಗಿತ್ತು.
ಪ್ರಸ್ತುತ ಕಾಶ್ಮೀರ ಕ್ರಮೇಣ ಶಾಂತಿ ನೆಲೆಸುತ್ತಿರುವುದರಿಂದ 55 ಕಂಪನಿಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಾಗುತ್ತಿದೆ. ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ಈ ವರೆಗೂ 2371 ಹಿಂಸಾಚಾರ ಪ್ರಕರಣಗಳ ದಾಖಲಾಗಿದ್ದು,ಈ ಪೈಕಿ ಜುಲೈ ತಿಂಗಳಲ್ಲಿ ಅತೀ ಹೆಚ್ಚು ಅಂದರೆ 820 ಪ್ರಕರಣಗಳು, ಆಗಸ್ಟ್ ನಲ್ಲಿ 747 ಪ್ರಕರಣಗಳು, ಸೆಪ್ಟೆಂಬರ್ ನಲ್ಲಿ 535 ಪ್ರಕರಣಗಳು, ಅಕ್ಟೋಬರ್ ನಲ್ಲಿ 179 ಪ್ರಕರಣಗಳು ಹಾಗೂ ನವೆಂಬರ್ ತಿಂಗಳಲ್ಲಿ 73 ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಡಿಸೆಂಬರ್ ತಿಂಗಳನಿಂದ ನಿಯಮಿತವಾಗಿ ಸಿಆರ್ ಪಿಎಫ್ ಕಂಪನಿಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಾಗುತ್ತಿದೆ. ಪ್ರಸ್ತುತ ಕಾಶ್ಮೀರದಲ್ಲಿ ಹಿಮ ಬೀಳುತ್ತಿದ್ದು, ಇದರಿಂದ ಈ ಕಾರ್ಯ ನಿಧಾನಗತಿಯಲ್ಲಿ ಸಾಗಿದೆ ಎಂದು ರಾಜೇಶ್ ಯಾದವ್ ತಿಳಿಸಿದ್ದಾರೆ.
ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ಭುಗಿಲೆದ್ದಿದ್ದ ಹಿಂಸಾಚಾರದಲ್ಲಿ 76 ಮಂದಿ ನಾಗರಿಕರು ಹಾಗೂ ಇಬ್ಬರು ಪೊಲೀಸರು ಸಾವನ್ನಪ್ಪಿ, ನೂರಾರು ಮಂದಿ ಸೈನಿಕರು ಗಾಯಗೊಂಡಿದ್ದರು.
Advertisement