
ನವದೆಹಲಿ: ಯೋಧರಿಕೆ ಕಳಪೆ ಗುಣಮಟ್ಟ ಆಹಾರ ನೀಡುತ್ತಿದ್ದಾರೆಂಬ ಆರೋಪ ಪ್ರಕರಣ ಕುರಿತಂತೆ ವರದಿ ಸಲ್ಲಿಸಲು ಕೇಂದ್ರ ಗೃಹ ಸಚಿವಾಲಯ ಬಿಎಸ್ಎಫ್'ಗೆ ಎರಡು ದಿನಗಳ ಕಾಲಾವಕಾಶವನ್ನು ನೀಡಿದೆ ಎಂದು ಮಂಗಳವಾರ ತಿಳಿದುಬಂದಿದೆ.
ಪ್ರಕರಣ ಸಂಬಂಧ ಕೆಲ ದಿನಗಳ ಹಿಂದಷ್ಟೇ ಬಿಎಸ್ಎಫ್ ಅಧಿಕಾರಿಗಳು ಗೃಹ ಸಚಿವಾಲಯಕ್ಕೆ ಮಧ್ಯಂತರ ವರದಿಯನ್ನು ಸಲ್ಲಿಕೆ ಮಾಡಿತ್ತು. ನಂತರ ಪ್ರಕರಣ ಸಂಬಂಧ ಸಂಪೂರ್ಣ ವರದಿ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ಬೇಕಿದೆ ಎಂದು ಬಿಎಸ್ಎಫ್ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದರು.
ಮೂಲಗಳ ಪ್ರಕಾರ ಅಧಿಕಾರಿಗಳು ಸಲ್ಲಿಸಿದ್ದ ಮಧ್ಯಂತರ ವರದಿಗೆ ಗೃಹ ಸಚಿವಾಲಯ ಅಸಮಾಧಾನ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಬಿಎಸ್ಎಫ್ ಅಧಿಕಾರಿಗಳಿಗೆ ಕಾಲಾವಕಾಶವನ್ನು ನೀಡಿದ್ದು, ಇನ್ನೆರಡು ದಿನಗಳೊಳಗಾಗಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ.
ಇದಲ್ಲದೆ ಇಂದು ಬಿಎಸ್ಎಫ್ ಪ್ರಧಾನ ನಿರ್ದೇಶಕ ಕೆ.ಕೆ. ಶರ್ಮಾ ಅವರು ಗೃಹ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿ ಮಾಡಲಿದ್ದು, ಪ್ರಕರಣ ಸೇರಿದಂತೆ ಸೇನೆಗೆ ಸಂಬಂಧಿಸಿದ ಇನ್ನಿತರೆ ವಿಚಾರಗಳ ಕುರಿತಂತೆ ಚರ್ಚೆ ನಡೆಸಲಿದ್ದಾರೆಂದು ವರದಿಗಳು ತಿಳಿಸಿವೆ.
ಕೆಲ ದಿನಗಳ ಹಿಂದಷ್ಟೇ ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಅವರು ಸೇನಾ ಅಧಿಕಾರಿಗಳ ವಿರುದ್ದ ಆರೋಪ ವ್ಯಕ್ತಪಡಿಸಿದ್ದರು. ಸೇನೆಯಲ್ಲಿ ಯೋಧರಿಗೆ ಕಳಪೆ ಗುಣಮಟ್ಟದ ಆಹಾರ ನೀಡುತ್ತಿದ್ದು, ಯೋಧರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆಂದು ವಿಡಿಯೋವೊಂದನ್ನು ಹರಿಬಿಟ್ಟಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿತ್ತು.
Advertisement