ಜಯಲಲಿತಾ ಸೋದರ ಸೊಸೆ ದೀಪಾ ಜಯಕುಮಾರ್ ರಾಜಕೀಯ ಪ್ರವೇಶಕ್ಕೆ ನಿರ್ಧಾರ

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರ ಸೋದರ ಸೊಸೆ ದೀಪಾ...
ಚೆನ್ನೈನ ಆರ್.ಟಿ.ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೀಪಾ ಜಯಕುಮಾರ್
ಚೆನ್ನೈನ ಆರ್.ಟಿ.ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೀಪಾ ಜಯಕುಮಾರ್
ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರ ಸೋದರ ಸೊಸೆ ದೀಪಾ ಜಯಕುಮಾರ್, ತಾವು ರಾಜಕೀಯಕ್ಕೆ ಸೇರಲು ನಿರ್ಧರಿಸಿರುವುದಾಗಿ ಪ್ರಕಟಿಸಿದ್ದಾರೆ.
ಆದರೆ ತಮ್ಮ ಮುಂದಿನ ಯೋಜನೆಗಳ ಬಗ್ಗೆ ಹೆಚ್ಚಿನ ವಿವರ ನೀಡದ ಅವರು, ಫೆಬ್ರವರಿ 24, ಜಯಲಲಿತಾ ಅವರ ಹುಟ್ಟುಹಬ್ಬದಂದು ಸಂಪೂರ್ಣ ಮಾಹಿತಿ ನೀಡುತ್ತೇನೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ, ಎಐಎಡಿಎಂಕೆ ಸ್ಥಾಪಕ ದಿವಂಗತ ಎಂ.ಜಿ.ರಾಮಚಂದ್ರನ್ ಅವರ 100ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಅವರಿಗೆ ಗೌರವ ನಮನ ಸಲ್ಲಿಸಿದ ನಂತರ ಮೊದಲ ಬಾರಿಗೆ ತಮ್ಮ ನಿವಾಸದ ಬಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಹೊಸ ಪ್ರಯಾಣವನ್ನು ಇಂದು ಆರಂಭಿಸುತ್ತಿದ್ದೇನೆ. ನನ್ನ ರಾಜಕೀಯ ಪ್ರಯಾಣವನ್ನು ಸರಿಯಾದ ಸಮಯದಲ್ಲಿ ಆರಂಭಿಸಲು ಯೋಜನೆ ಹಾಕಿಕೊಂಡಿದ್ದೇನೆ ಎಂದು ಹೇಳಿದರು.
''ತಮಿಳುನಾಡು ಜನತೆಯ ಮನವಿಯನ್ನು ಆಲಿಸಲು ನಾನು ನಿರ್ಧರಿಸಿದ್ದೇನೆ. ರಾಜ್ಯದ ಯುವಜನತೆ ನನ್ನ ಬೆಂಬಲಕ್ಕಿದ್ದಾರೆ.  ಇಡೀ ಏಷ್ಯಾದಲ್ಲಿಯೇ ತಮಿಳುನಾಡನ್ನು ಉತ್ತಮ ರಾಜ್ಯವನ್ನಾಗಿ ಮಾಡುವಲ್ಲಿ ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡೋಣ.ಎಂದು ಮನವಿ ಮಾಡಿಕೊಂಡರು.
ಶಶಿಕಲಾ ವಿರುದ್ಧ ವಾಗ್ದಾಳಿ: ಇದೇ ಸಂದರ್ಭದಲ್ಲಿ ಜಯಲಲಿತಾ ಸಹಚರೆ ಪಕ್ಷದ ವರಿಷ್ಠೆ ಶಶಿಕಲಾ ವಿರುದ್ಧ ವಾಗ್ಧಾಳಿ ನಡೆಸಿದ ದೀಪಾ ಜಯಕುಮಾರ್, ಜಯಲಲಿತಾ ಅವರ ಸ್ಥಾನದಲ್ಲಿ ಬೇರೆಯವರನ್ನು ನಾನು ಒಪ್ಪಿಕೊಳ್ಳುವುದಿಲ್ಲ.ಎಂಜಿಆರ್ ಮತ್ತು ಜಯಲಲಿತಾ ಅವರನ್ನು ಮಾತ್ರ ನಾಯಕರನ್ನಾಗಿ ನಾನು ಸ್ವೀಕರಿಸುವುದು.ನನ್ನಲ್ಲಿ ಈಗ ಎರಡು ಆಯ್ಕೆಗಳಿವೆ, ಒಂದು ಎಐಎಡಿಎಂಕೆ ಸೇರುವುದು, ಇನ್ನೊಂದು ಹೊಸ ಪಕ್ಷ ಸ್ಥಾಪಿಸುವುದು. ನನ್ನ ಬೆಂಬಲಿಗರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.
ಜಯಲಲಿತಾ ಅವರು  ತಮ್ಮ ಆಲೋಚನೆ, ಸಲಹೆಗಳಂತೆ ಕೆಲಸ ಮಾಡುತ್ತಿದ್ದರು ಎಂದು ಶಶಿಕಲಾ ಅವರ ಕುಟುಂಬ ಹೇಳುತ್ತಿರುವ ಮಾತಿನಲ್ಲಿ ಸತ್ಯವಿಲ್ಲ, ಅದು ಶುದ್ಧ ಸುಳ್ಳು ಎಂದು ಕೂಡ ಆರೋಪಿಸಿದರು.ನನ್ನ ಹೆಸರು ಕೆಡಿಸಲು ಅನೇಕ ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ಜನರಿಗೆ ಸತ್ಯಾಂಶ ತಿಳಿದಿಲ್ಲ ಎಂದರು.
42 ವರ್ಷದ ದೀಪಾ ಜಯಕುಮಾರ್ ತಮ್ಮ ಅತ್ತೆ ಜಯಲಲಿತಾ ಅವರನ್ನು ಹೋಲುತ್ತಿದ್ದಾರೆ. ಕಳೆದ ಕೆಲ ವಾರಗಳಿಂದ ತಮಿಳುನಾಡಿನಲ್ಲಿ ದೀಪಾ ಜಯಕುಮಾರ್ ಅಭಿಮಾನಿಗಳು ಜಯಲಲಿತಾ ಅವರನ್ನೇ ಹೋಲುವಂತೆ ಭಾವಚಿತ್ರಗಳನ್ನು ಮುದ್ರಿಸಿ ಅಲ್ಲಲ್ಲಿ ಅಂಟಿಸಿದ್ದಾರೆ. ಜಯಲಲಿತಾ ಅವರಂತೆ ಸೀರೆ ತೊಟ್ಟು ಸೆರಗನ್ನು ಮುಚ್ಚಿಕೊಂಡು ಅಭಿಮಾನಿಗಳತ್ತ ಕೈ ಬೀಸುವ ಪೋಸ್ಟರ್ ಗಳು  ರಾರಾಜಿಸುತ್ತಿವೆ.
ಎಐಎಡಿಎಂಕೆಯ ಒಂದು ಬಣ ಜಯಲಲಿತಾ ಅವರ ಸಹಚರೆ ಇತ್ತೀಚೆಗೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಗೊಂಡ ಶಶಿಕಲಾಗೆ ವಿರುದ್ಧವಾಗಿ ಅವರಿಗೆ ಸರಿಸಮನಾಗಿ ದೀಪಾ ಅವರನ್ನು ಮುಂದೆ ತರುವ ಬಯಕೆಯಲ್ಲಿದೆ. 
ಇಂದು ಅವರು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಘೋಷಣೆ ಮಾಡುತ್ತಾರೆ ಎಂಬ ನಿರೀಕ್ಷೆಯಿಂದ ನೂರಾರು ಅಭಿಮಾನಿಗಳು ಚೆನ್ನೈನ ಟಿ.ನಗರದಲ್ಲಿರುವ ಅವರ ನಿವಾಸದ ಮುಂದೆ ಜಮಾಯಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com