58 ವರ್ಷ ಮೇಲ್ಪಟ್ಟ ಮಂಗಳಮುಖಿಯರಿಗೆ ರೈಲ್ವೇಯಲ್ಲಿ ರಿಯಾಯಿತಿ!

ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ರೈಲ್ವೇ ಇಲಾಖೆ 58 ವರ್ಷ ಮೇಲ್ಪಟ್ಟ ತೃತೀಯ ಲಿಂಗಿಗಳಿಗೂ ರಿಯಾಯಿತಿ ನೀಡಲು ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ರೈಲ್ವೇ ಇಲಾಖೆ 58 ವರ್ಷ ಮೇಲ್ಪಟ್ಟ ತೃತೀಯ ಲಿಂಗಿಗಳಿಗೂ ರಿಯಾಯಿತಿ ನೀಡಲು ಮುಂದಾಗಿದೆ.

ಮೂಲಗಳ ಪ್ರಕಾರ ಇತ್ತೀಚೆಗೆ ದೇಶದ ತೃತೀಯಲಿಂಗಿಗಳಿಗೂ ರೈಲ್ವೇ ಇಲಾಖೆಯಲ್ಲಿನ ಸವಲತ್ತುಗಳನ್ನು ನೀಡುವ ಕುರಿತು ಗಮನ ಹರಿಸುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನದ ಮೇರೆಗೆ ಕೇಂದ್ರ ಸರ್ಕಾರ ಈ  ಮಹತ್ವದ ನಿರ್ಣಯ ಕೈಗೊಳ್ಳುತ್ತಿದೆ. ಅದರಂತೆ 58 ವರ್ಷ ಮೇಲ್ಪಟ್ಟ ತೃತೀಯಲಿಂಗಿಗಳಿಗೆ ರೈಲ್ವೇ ಪ್ರಯಾಣದ ಶೇ.50 ರಿಯಾಯಿತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದು ಮಾತ್ರವಲ್ಲದೇ ಹಿರಿಯ ತೃತೀಯ ಲಿಂಗಿಗಳಿಗೆ  ಪುರುಷ ಮತ್ತು ಮಹಿಳಾ ಸೀಟುಗಳಂತೆಯೇ ಪ್ರತ್ಯೇಕ ಸೀಟು ವ್ಯವಸ್ಥೆ ಮಾಡಲೂ ಕೂಡ ಮುಂದಾಗಿದೆ.

ಈ ಹಿಂದೆ ರೈಲ್ವೇ ಇಲಾಖೆಯಲ್ಲಿನ ಅರ್ಜಿಗಳಲ್ಲಿ ತೃತೀಯ ಲಿಂಗಿಗಳನ್ನು ಗುರುತಿಸುವ ಕಲಂ ಅನ್ನು ಕೇಂದ್ರ ಸರ್ಕಾರ ಆರಂಭಿಸಿತ್ತು. ಇದೀಗ ತೃತೀಯ ಲಿಂಗಿ ಹಿರಿಯ ನಾಗರಿಕರಿಗೂ ರಿಯಾಯಿತಿ ನೀಡಲು ಕೇಂದ್ರ ಸರ್ಕಾರ  ಮುಂದಾಗಿದೆ. ಪ್ರಸ್ತುತ ಈ ವಿಚಾರದ ಕುರಿತು ರೈಲ್ವೇ ಇಲಾಖೆಯಲ್ಲಿನ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುತ್ತಿದ್ದು, ನಿಯಮಾವಳಿಗೆ ಅಂತಿಮ ಸ್ಪರ್ಶ ನೀಡುವ ಕಾರ್ಯ ಪ್ರಗತಿಯಲ್ಲಿದೆ.

ರೈಲ್ವೇ ಇಲಾಖೆಯಲ್ಲಿ ಈ ವರೆಗೂ 60 ವರ್ಷ ವಯಸ್ಸಿನ ಪುರುಷ ಹಾಗೂ 58 ವರ್ಷ ವಯಸ್ಸಿನ ಮಹಿಳಾ ಪ್ರಯಾಣಿಕರಿಗೆ ರಿಯಾಯಿತಿ ನೀಡಲಾಗುತ್ತಿತ್ತು. ಇದೀಗ 58 ವರ್ಷ ವಯಸ್ಸಿನ ತೃತೀಯ ಲಿಂಗಿಗಳಿಗೂ ರಿಯಾಯಿತಿ  ನೀಡುವುದು ಖಚಿತವಾಗಿದೆ. ತೃತೀಯ ಲಿಂಗಿಗಳ ಹಕ್ಕುಗಳ ಕುರಿತು ಈ ಹಿಂದೆ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ತೃತೀಯ ಲಿಂಗಿಗಳಿಗೂ ಸವಲತ್ತು ಕಲ್ಪಿಸುವಂತೆ ಕೇಂದ್ರ  ಸರ್ಕಾರಕ್ಕೆ ಸೂಚನೆ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com