ವೃದ್ಧ ತಂದೆತಾಯಿಗಳೂ ಪರಿಹಾರದಲ್ಲಿ ಪಾಲು ಪಡೆಯಲು ಅರ್ಹರು: ಮದ್ರಾಸ್ ಹೈ ಕೋರ್ಟ್ ತೀರ್ಪು

ಕಾರ್ಮಿಕರ ಪರಿಹಾರ ಕಾಯ್ದೆಯಡಿ ಮಂಜೂರಾದ ಪರಿಹಾರದ ಪಾಲು ಪಡೆಯಲು ಮೃತ ವ್ಯಕ್ತಿಯ ವೃದ್ಧ...
ಮದ್ರಾಸ್ ಹೈ ಕೋರ್ಟ್
ಮದ್ರಾಸ್ ಹೈ ಕೋರ್ಟ್
ಚೆನ್ನೈ: ಕಾರ್ಮಿಕರ ಪರಿಹಾರ ಕಾಯ್ದೆಯಡಿ ಮಂಜೂರಾದ ಪರಿಹಾರದ ಪಾಲು ಪಡೆಯಲು ಮೃತ ವ್ಯಕ್ತಿಯ ವೃದ್ಧ ತಂದೆತಾಯಿಗಳು ಕೂಡ ಅರ್ಹರು ಎಂದು ಮದ್ರಾಸ್ ಹೈಕೋರ್ಟ್ ನ ಮಧುರೈ ನ್ಯಾಯಪೀಠ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿ ಎಸ್.ವೈದ್ಯನಾಥನ್ ಅವರು ಮೃತ ವ್ಯಕ್ತಿಯ ಪತ್ನಿ ತಿಲಗಾವತಿಯವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಈ ತೀರ್ಪು ನೀಡಿದ್ದಾರೆ.ತಮ್ಮ ಪತಿಯ ಮರಣದಿಂದ ಸಿಕ್ಕಿದ ಇಡೀ ಪರಿಹಾರದ ಮೊತ್ತವನ್ನು ತಮಗೆ ಹಾಗೂ ತಮ್ಮ ಇಬ್ಬರು ಮಕ್ಕಳಿಗೆ ನೀಡಬೇಕೆಂದು ತಿಲಗಾವತಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ತಮಿಳುನಾಡಿನ ಶಿವಗಂಗಾದ ಶಕ್ತಿ ಸಕ್ಕರೆ ಕಾರ್ಖಾನೆಯಲ್ಲಿ ಯಂತ್ರ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ ಸುಬ್ರಹ್ಮಣ್ಯನ್ ಕೆಲಸದಲ್ಲಿ ನಿರತರಾಗಿದ್ದ ವೇಳೆ ಯಂತ್ರ ತಾಗಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದರು.
ಕೂಲಿಕಾರ್ಮಿಕರ ಪರಿಹಾರ ಕಾಯ್ದೆಯ ಸೆಕ್ಷನ್ 22ರಡಿಯಲ್ಲಿ ತಿಲಾಗವತಿಗೆ ನ್ಯಾಯಾಧೀಕರಣ 5.75 ಲಕ್ಷ ರೂಪಾಯಿ ಪರಿಹಾರ ಘೋಷಿಸಿ ಡಿಸೆಂಬರ್ 2015ರಲ್ಲಿ ತೀರ್ಪು ನೀಡಿತ್ತು.  ಮಧುರೈಯ ಕಾರ್ಮಿಕ ಇಲಾಖೆಯ ಉಪ ಆಯುಕ್ತರ ನೇತೃತ್ವದಲ್ಲಿ ರಚಿಸಲಾಗಿದ್ದ ತನಿಖಾಧಿಕಾರಿ ಪರಿಹಾರದ ನಿಜವಾದ ಫಲಾನುಭವಿಗಳನ್ನು ಗುರುತಿಸಿ ಸುಬ್ರಹ್ಮಣ್ಯನ್ ಅವರ ಪತ್ನಿ ತಿಲಗಾವತಿ ಮತ್ತು ಪೋಷಕರಿಗೆ ಪರಿಹಾರದ ಮೊತ್ತವನ್ನು ಸೂಕ್ತ ಪ್ರಮಾಣದಲ್ಲಿ ಹಂಚಬೇಕೆಂದು ಸೂಚಿಸಿತ್ತು. ತಿಲಗಾವತಿ ಮಕ್ಕಳು ಪ್ರಾಯಕ್ಕೆ ಬಂದಿದ್ದರಿಂದ ಅವರನ್ನು ಪರಿಹಾರದ ಮೊತ್ತವನ್ನು ಪಡೆಯುವಿಕೆಯಿಂದ ಹೊರತುಪಡಿಸಲಾಗಿತ್ತು.
ಇದನ್ನು ಪ್ರಶ್ನಿಸಿ ತಿಲಗಾವತಿ ಮದ್ರಾಸ್ ಹೈಕೋರ್ಟ್ ಮೊರೆ ಹೋದರು. ಅರ್ಜಿಯಲ್ಲಿ ವಿಧವೆ ಪತ್ನಿ ಕಿರಿಯ (ಕಾನೂನುಬದ್ಧ ಅಥವಾ ಸ್ವೀಕರಿಸುತ್ತಿದ್ದರು) ಮಗ, ಮದುವೆಯಾಗದಿರುವ (ಕಾನೂನುಬದ್ಧ ಅಥವಾ ದತ್ತು ಪಡೆದ)ಮಗಳು ಮಾತ್ರ ಪರಿಹಾರ ಪಡೆಯಲು ಅರ್ಹರು. ತಮಗೆ ಮತ್ತು ಮಕ್ಕಳಿಗೆ ಮಾತ್ರ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದರು. ಮೃತ ವ್ಯಕ್ತಿಯ ತಾಯಿ ವಿಧವೆಯಾಗಿಲ್ಲದಿರುವುದರಿಂದ ಆಕೆಗೆ ಪರಿಹಾರ ನೀಡುವ ಪ್ರಶ್ನೆ ಉದ್ಧವಿಸುವುದಿಲ್ಲ ಎಂದು ತಿಲಗಾವತಿ ಅರ್ಜಿಯಲ್ಲಿ ವಾದಿಸಿದ್ದಳು. ಇದಕ್ಕೆ ಪ್ರತಿಯಾಗಿ ಸುಬ್ರಹ್ಮಣ್ಯನ್ ಪೋಷಕರು ತಮಗೆ ವಯಸ್ಸಾಗಿದ್ದು ತಾವು ಜೀವನಕ್ಕೆ ಮೃತ ಮಗನನ್ನು ಅವಲಂಬಿಸಿದ್ದೆವು. ತಿಲಗಾವತಿ ಪತಿಯನ್ನು ತೊರೆದಿದ್ದಳು, ಆತನ ಜೀವನದ ಕೊನೆಗಾಲದಲ್ಲಿ ಗಂಡನ ಜೊತೆಯಲ್ಲಿ ವಾಸಿಸುತ್ತಿರಲಿಲ್ಲ ಎಂದು ಪ್ರತಿ ಅರ್ಜಿ ಸಲ್ಲಿಸಿದ್ದರು. 
ತಮ್ಮ ಮಗನಿಗೆ ಗಾಯವಾದಾಗ ಆಸ್ಪತ್ರೆಯ ವೈದ್ಯಕೀಯ ವೆಚ್ಚವನ್ನು ತಾವು ಭರಿಸಿದ್ದೆವು. ಹಾಗಾಗಿ ಕಾನೂನು ದೃಷ್ಟಿಯಲ್ಲಿ ತಮಗೆ ಕೂಡ ಪರಿಹಾರ ಮೊತ್ತ ಸಮನಾಗಿ ಸಿಗಬೇಕೆಂದು ವಾದಿಸಿದ್ದರು. ಕಳೆದ ತಿಂಗಳು ವಿಚಾರಣೆ ನಡೆಸಿದ ಎಸ್.ವೈದ್ಯನಾಥನ್, ಮೃತ ವ್ಯಕ್ತಿಯ ವೃದ್ಧ ಪೋಷಕರು ಪರಿಹಾರ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಯಾಕೆಂದರೆ ಅವರು ಕೇಳುವ ಪರಿಹಾರದ ಹಕ್ಕು ಪರಿಹಾರ ಕಾಯ್ದೆಯ ಸೆಕ್ಷನ್ ಆಫ್ ನಿಯಮಗಳ 2 (1) (ಡಿ) (III) (ಬಿ)ಯಡಿ ಬರುತ್ತದೆ. ಅದರಲ್ಲಿ ವಿಧವೆ ತಾಯಿಯ ಜೊತೆಗೆ ಪೋಷಕರು ಪರಿಹಾರಕ್ಕೆ ಅರ್ಹರು ಎಂದು ನಮೂದಿಸಲಾಗಿದೆ ಎಂದು ವಿವರಿಸಿ ತಿಲಗಾವತಿ ಅರ್ಜಿಯನ್ನು ತಳ್ಳಿಹಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com