
ನವದೆಹಲಿ: ಅಕ್ರಮ 2ಜಿ ತರಂಗಾಂತರ ಹಂಚಿಕೆ ಸಂಬಂಧ ಏರ್ಸೆಲ್-ಮ್ಯಾಕ್ಸಿಸ್ ಒಪ್ಪಂದ ಪ್ರಕರಣದ ಮಾರನ್ ಸಹೋದರರ ವಿರುದ್ಧದ ವಿಚಾರಣೆಯನ್ನು ಸಿಬಿಐ ವಿಶೇಷ ನ್ಯಾಯಾಲಯ ಬುಧವಾರ ಜನವರಿ 24ಕ್ಕೆ ಮುಂದೂಡಿದೆ.
ಲಾಭಾಂಶ ಪಡೆದು ಏರ್ಸೆಲ್-ಮ್ಯಾಕ್ಸಿಸ್ ಸಂಸ್ಥೆಗಳಿಗೆ ಅಕ್ರಮವಾಗಿ ತರಂಗಾಂತರ ಹಂಚಿಕೆ ಮಾಡಿದ ಆರೋಪ ಸಂಬಂಧ ಮಾಜಿ ಟೆಲಿಕಾಮ್ ಮಿನಿಸ್ಟರ್ ದಯಾನಿಧಿ ಮಾರನ್ ಹಾಗೂ ಅವರ ಸಹೋದರ ಕಳಾನಿಧಿ ಮಾರನ್ ಸೇರಿದಂತೆ ಇತರೆ ಇಬ್ಬರು ವಿಚಾರಣೆ ಎದುರಿಸುತ್ತಿದ್ದರು. ಈ ವಿಚಾರಣೆಯನ್ನು ನ್ಯಾಯಾಲಯ ಜನವರಿ 24ಕ್ಕೆ ಮುಂದೂಡಿದೆ.
ಇನ್ನು ಈ ಹಿಂದೆ ಇದೇ ಪ್ರಕರಣ ಸಂಬಂಧ ಅಕ್ರಮವಾಗಿ ತಮ್ಮ ನಿವಾಸದಲ್ಲಿ ದೂರವಾಣಿ ವಿನಿಮಯ ಕೇಂದ್ರ ಸ್ಥಾಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಯಾನಿಧಿ ಮಾರನ್ ಹಾಗೂ ಅವರ ಸಹೋದರ ಕಲಾನಿಧಿ ಮಾರನ್ ಮತ್ತು ಇತರೆ ಮೂವರು ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಮಾರನ್ ಸಹೋದರರಲ್ಲದೇ ಇಬ್ಬರು ಬಿಎಸ್ಎನ್ಎಲ್ ನ ಚೀಫ್ ಜನರಲ್ ಮ್ಯಾನೇಜರ್ ಗಳ ವಿರುದ್ಧವೂ ಸಿಬಿಐ ಚಾರ್ಜ್ ಶೀಟ್ ದಾಖಲಿಸಿತ್ತು. ಅಕ್ರಮ ದೂರವಾಣಿ ವಿನಿಮಯ ಕೇಂದ್ರ ಸ್ಥಾಪನೆಯಿಂದಾಗಿ ಸರ್ಕಾರಕ್ಕೆ 1.78 ಕೋಟಿ ರುಪಾಯಿ ನಷ್ಟವಾಗಿದೆ ಎಂದು ಸಿಬಿಐ ಚಾರ್ಜ್ ಶೀಟ್ ನಲ್ಲಿ ಆರೋಪಿಸಿತ್ತು.
ದೂರಸಂಪರ್ಕ ಸಚಿವರಾಗಿದ್ದ ಸಂದರ್ಭದಲ್ಲಿ ತಮ್ಮ ನಿವಾಸಕ್ಕೆ ಅಕ್ರಮವಾಗಿ 300 ಅತ್ಯಧಿಕ ವೇಗದ ದೂರವಾಣಿ ಸಂಪರ್ಕಗಳನ್ನು ಪಡೆದು ಅದನ್ನು ಸನ್ ಟಿವಿ ನೆಟ್ ವರ್ಕ್‌ನ ವಾಹಿನಿಗಳನ್ನು ಪ್ರಸಾರ ಮಾಡಲು ಬಳಸಿಕೊಂಡಿದ್ದ ಆರೋಪವನ್ನು ಮಾರನ್ ಸಹೋದರರು ಎದುರಿಸುತ್ತಿದ್ದಾರೆ.
Advertisement