

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸುಪ್ರೀಂಕೋರ್ಟ್ ಆದೇಶದ ವಿರುದ್ಧ ನಡೆದುಕೊಂಡಿದ್ದು, ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಗುರುವಾರ ಚುನಾವಣಾ ಆಯೋಗಕ್ಕೆ ಮೋದಿ ವಿರುದ್ಧ ದೂರು ದಾಖಲಿಸಿದೆ.
ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರದಲ್ಲಿ ನಡೆದ ರಾಮಾಯಣ ದರ್ಶನಂ ವಸ್ತುಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸುಪ್ರೀಂಕೋರ್ಟ್ ನ ಆದೇಶದ ವಿರುದ್ಧ ಮಾತನಾಡಿದ್ದು, ಮೋದಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಆಗ್ರಹಿಸಿದೆ ಎಂದು ತಿಳಿದುಬಂದಿದೆ.
ಪ್ರಧಾನಿ ಮೋದಿಯವರು ಕಾರ್ಯಕ್ರಮವನ್ನು ಚುನಾವಣಾ ಪ್ರಚಾರವೆಂಬಂತೆ ಬಳಕೆ ಮಾಡಿಕೊಂಡಿದ್ದು, ಧಾರ್ಮಿಕತೆಗೆ ಸಂಬಂಧಿಸಿದ ಹೇಳಿಕೆಯನ್ನು ನೀಡಿ ಸುಪ್ರೀಂ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಹೇಳಿಕೆ ವೇಳೆ ಮೋದಿಯವರು ಭಾರತದ ಪ್ರಮುಖ ಮಹಾಕಾವ್ಯ ರಾಮಾಯಣದಲ್ಲಿರುವ ಪ್ರಮುಖ ಪಾತ್ರಗಳನ್ನು ಹೆಸರಿಸಿರುವ ಅವರು, ರಾಮನನ್ನು ತಮ್ಮ ಸರ್ಕಾರಕ್ಕೆ ಹೋಲಿಕೆ ಮಾಡಿದ್ದಾರೆ. ಚುನಾವಣೆಗಳು ಹತ್ತಿರಬರುತ್ತಿರುವ ಹಿನ್ನಲೆಯಲ್ಲಿ ಧರ್ಮ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ತಿಳಿಸಿದೆ ಎನ್ನಲಾಗಿದೆ. ಅಲ್ಲದೆ, ಪ್ರಧಾನಿ ಮೋದಿಯವರು ನೀಡಿದ ಸಂಪೂರ್ಣ ಭಾಷಣ ಕುರಿತ ಪತ್ರವನ್ನು ಆಯೋಗಕ್ಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ.