ಸರ್ಕಾರದ ಇಲಾಖೆಗಳು ಒಟ್ಟಾಗಿ ವಿಶಾಲ ದೃಷ್ಟಿಕೋನದಿಂದ ಕೆಲಸ ಮಾಡಬೇಕು: ಪ್ರಧಾನಿ ಮೋದಿ

ಸರ್ಕಾರದ ವಿವಿಧ ಇಲಾಖೆಗಳು ವಿಶಾಲ ದೃಷ್ಟಿಕೋನದಡಿಯಲ್ಲಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ...
ನವದೆಹಲಿ: ಸರ್ಕಾರದ ವಿವಿಧ ಇಲಾಖೆಗಳು ವಿಶಾಲ ದೃಷ್ಟಿಕೋನದಡಿಯಲ್ಲಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ಕರೆ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸರ್ಕಾರದ ಇಲಾಖೆಗಳು ನ್ಯಾಯಾಲಯಗಳಲ್ಲಿ ವಿವಾದಗಳನ್ನು ಇತ್ಯರ್ಥಗೊಳಿಸಲು ಆದ್ಯತೆ ನೀಡುತ್ತಿವೆ ಮತ್ತು ಪ್ರತ್ಯೇಕವಾಗಿ ಕೆಲಸ ಮಾಡುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು. 
ಅವರು ಇಂದು  ದೆಹಲಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಗುಜರಾತ್ ನ ಕಚ್ ನ ರನ್ನ್ ಎಂಬಲ್ಲಿ ಪ್ರವಾಸೋದ್ಯಮ, ಸಂಸ್ಕೃತಿ, ಯುವಜನ ವ್ಯವಹಾರ ಮತ್ತು ಕ್ರೀಡಾ ಇಲಾಖೆಗಳ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಚಿವರುಗಳು ಮತ್ತು ಕಾರ್ಯದರ್ಶಿಗಳ ಸಮ್ಮೇಳನವನ್ನು ಉದ್ಧೇಶಿಸಿ ಮಾತನಾಡಿದರು.
ದುರದೃಷ್ಟವಶಾತ್ ಸರ್ಕಾರದ ಇಲಾಖೆಗಳು ಒಟ್ಟಾಗಿ ಕೆಲಸ ಮಾಡುವುದನ್ನು ಬಿಟ್ಟು ಬೇರೆ ಬೇರೆಯಾಗಿ ಕಾರ್ಯನಿರ್ವಹಿಸುತ್ತವೆ. ಕೆಲವೊಮ್ಮೆ ಇಲಾಖೆಗಳ ಒಳಗೆ ಹಲವು ವಿಭಾಗಗಳಾಗುತ್ತವೆ. ಇಲಾಖೆಗಳ ಮಧ್ಯೆ ಸಮನ್ವಯತೆಯಿರುವುದಿಲ್ಲ. ಹಾಗಾಗಿ ಯಾವುದಾದರೊಂದು ಇಲಾಖೆ ಒಂದು ಕಾರ್ಯಕ್ರಮದ ಬಗ್ಗೆ ಯೋಚಿಸಿದರೆ ಇನ್ನೊಂದು ಇಲಾಖೆ ಅದಕ್ಕೆ ವಿರುದ್ಧವಾಗಿ ಚಿಂತಿಸುತ್ತದೆ. ಕೆಲವೊಮ್ಮೆ ಒಂದೇ ಸರ್ಕಾರದ ಎರಡು ಇಲಾಖೆಗಳು ಕೋರ್ಟ್ ನಲ್ಲಿ ವಾದ ಮಾಡಿ ವಕೀಲರಿಗೆ ಹಣ ನೀಡಿ ವಿವಾದಗಳನ್ನು ಬಗೆಹರಿಸಲು ನೋಡುತ್ತವೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ. ಈ ಪರಿಸ್ಥಿತಿ ಬದಲಾಗಬೇಕು. ಇದಕ್ಕೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಒಟ್ಟಿಗೆ ಕುಳಿತು ವಿಸ್ತಾರವಾಗಿ ವಿಶಾಲ ದೃಷ್ಟಿಕೋನದಿಂದ ಯೋಚಿಸಿ ಪ್ರತಿ ಇಲಾಖೆಯ ಪಾತ್ರಗಳ ಬಗ್ಗೆ ಚಿಂತಿಸಿ ಏನು ಫಲಿತಾಂಶ ಕಂಡುಹಿಡಿಯಬಹುದು ಎಂಬ ಬಗ್ಗೆ ಆಲೋಚಿಸಬೇಕು ಎಂದು ಮೋದಿ ಹೇಳಿದರು.
ಬದಲಾಗುತ್ತಿರುವ ಜಗತ್ತಿನ ವಿದ್ಯಮಾನಗಳಿಗೆ ತಕ್ಕಂತೆ ಸರ್ಕಾರ ಮಾಡುವ ಕೆಲಸಗಳನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ. ಪ್ರತಿದಿನ ನಾವು ಅವುಗಳನ್ನು ಮೌಲ್ಯಮಾಪನ ಮಾಡಬೇಕು ಎಂದು ಹೇಳಿದರು.
ಪ್ರವಾಸೋದ್ಯಮ ಇಲಾಖೆಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಭಾರತ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಂಪದ್ಭರಿತವಾಗಿದ್ದು ಬೇರೆ ದೇಶದ ಪ್ರವಾಸಿ ಪ್ರಿಯರನ್ನು ಸೆಳೆಯುವ ಸಾಮರ್ಥ್ಯವಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com