ಬಡವರಿಗೆ ಸೂರು, ಊಟ, ಉಚಿತ ಶಿಕ್ಷಣ: ಪಂಜಾಬ್ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ

'ಏಕ್ ಪರಿವಾರ್, ಏಕ್ ರೋಜ್ ಘಾರ್' ಯೋಜನೆಯಡಿ ಬಿಜೆಪಿ ಪ್ರತಿ ಬಡವರಿಗೆ ಮನೆ...
ನಿನ್ನೆ ಜಲಂದರ್ ನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಅರುಣ್ ಜೇಟ್ಲಿ
ನಿನ್ನೆ ಜಲಂದರ್ ನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಅರುಣ್ ಜೇಟ್ಲಿ
ಚಂಡೀಗಢ: 'ಏಕ್ ಪರಿವಾರ್, ಏಕ್ ರೋಜ್ ಘಾರ್' ಯೋಜನೆಯಡಿ ಬಿಜೆಪಿ ಪ್ರತಿ ಬಡವರಿಗೆ ಮನೆ ಒದಗಿಸಿಕೊಡುವ, 2 ಕೆಜಿ ತುಪ್ಪ, 5 ಕೆಜಿ ಸಕ್ಕರೆಯನ್ನು ನೀಲಿ ಕಾರ್ಡು ಹೊಂದಿದವರಿಗೆ ನೀಡುವ, ಬಡ ಕುಟುಂಬಗಳ ಹೆಣ್ಣು ಮಕ್ಕಳಿಗೆ ಪಿಎಚ್ ಡಿವರೆಗೆ ಉಚಿತ ಶಿಕ್ಷಣ ನೀಡುವ ಚುನಾವಣಾ ಭರವಸೆಗಳ ಪ್ರಣಾಳಿಕೆಯನ್ನು  ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನಿನ್ನೆ ಜಲಂದರ್ ನಲ್ಲಿ ಬಿಡುಗಡೆ ಮಾಡಿದರು. ಇದು ಪಂಜಾಬ್ ಚುನಾವಣೆಯಲ್ಲಿ ಬಿಜೆಪಿ ಕಡೆಯಿಂದ ಜನತೆಗೆ ನೀಡುತ್ತಿರುವ ಭರವಸೆಗಳಾಗಿವೆ.
ಈ ವರ್ಷ ಜುಲೈಯಲ್ಲಿ ಸರಕು ಮತ್ತು ಸೇವಾ ತೆರಿಗೆ ಜಾರಿಗೊಳಿಸುವ ಮೂಲಕ ರಾಜ್ಯ ಸರ್ಕಾರದ ಆದಾಯ ಹೆಚ್ಚಾಗಲಿದೆ. ನಮ್ಮ ಚುನಾವಣಾ ಪ್ರಣಾಳಿಕೆ ಮೂಲಸೌಕರ್ಯ ಮತ್ತು ಜನರ ಸಾಮಾಜಿಕ ಉದ್ಧಾರವನ್ನ ಒಳಗೊಂಡಿದೆ ಎಂದು ಅವರು ಹೇಳಿದರು.
ಶಿರೋಮಣಿ ಅಕಾಲಿದಳದ ಜೊತೆಗಿನ ಮೈತ್ರಿ ಈ ಹಿಂದಿನಂತೆ ಮುಂದೆಯೂ ಮುಂದುವರಿಯಲಿದ್ದು, ಪಂಜಾಬ್ ಜನತೆ ಬಿಜೆಪಿಗೆ ಮತ ಹಾಕಿ ಗೆಲ್ಲಿಸಿದರೆ ಅಭಿವೃದ್ಧಿ ಚಟುವಟಿಕೆಗಳನ್ನು ಇನ್ನಷ್ಟು ಹೆಚ್ಚಿಸುತ್ತೇವೆ ಎಂದು ಹೇಳಿದರು.
ಪ್ರಣಾಳಿಕೆಯಲ್ಲಿ ಬಿಜೆಪಿ, ಏಳನೇ ವೇತನ ಆಯೋಗದ ಜಾರಿ, ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ವರ್ಷಕ್ಕೆ ಏರಿಕೆ, ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಗೆ 5 ಹೊಸ ಸ್ನಾತಕೋತ್ತರ ಸಂಸ್ಥೆಗಳ ಆರಂಭವನ್ನು ಮಾಡುವುದಾಗಿ ಹೇಳಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪಂಜಾಬ್ ನ್ನು ಮಾದಕ ವ್ಯಸನ ಮುಕ್ತ ರಾಜ್ಯವನ್ನಾಗಿ ಮಾಡುವುದಾಗಿ ಭರವಸೆ ನೀಡಿದೆ.
ನೋಟುಗಳ ಅಮಾನ್ಯತೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೇಟ್ಲಿ, ಒಂದು ಉತ್ತಮ ನಡೆ ಯಾವತ್ತಿಗೂ ವಿಫಲವಾಗುವುದಿಲ್ಲ ಎಂದು ಉತ್ತರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com