ಚೆನ್ನೈ: ಜಯಲಲಿತಾ ಸಾವಿನ ರಹಸ್ಯ ಇನ್ನೂ ಹಾಗೆಯೇ ಉಳಿದಿರುವಂತೆಯೇ ಅವರು ಒಡೆತನದ ಕೊಡನಾಡು ಎಸ್ಟೇಟ್'ನ ರಹಸ್ಯ ಸಾವಿನ ಸರಣಿ ಮುಂದುವರೆದಿದೆ.
ಇದೀಗ ಕೊಡನಾಡು ಎಸ್ಟೇಟ್ ನಲ್ಲಿ ಅಕೌಂಟೆಂಟ್ ಆಗಿದ್ದ ದಿನೇಶ್ ಕುಮಾರ್ ಎಂಬುವವರು ನಿಗೂಢವಾಗಿ ನೇಣಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದು ಜಯಾ ಸಾವಿನ ಬಳಿಕ ಕೊಡನಾಡು ಎಸ್ಟೇಟ್ ನಲ್ಲಿ ನಡೆದ ನಾಲ್ಕನೆ ಸಾವಿನ ಪ್ರಕರಣವಾಗಿದೆ. ಎಸ್ಟೇಟ್ ಗೆ ಹೊಸ ಮಾಲೀಕರು ಬರಲಿದ್ದಾರೆ. ಹೀಗಾಗಿ ತಮ್ಮ ಕೆಲಸಕ್ಕೆ ಕುತ್ತು ಬರಬಹುದೆಂದು ದಿನೇಶ್ ಕುಮಾರ್ ಕೆಲ ಸಿಬ್ಬಂದಿ ಜೊತೆ ಮಾತನಾಡುತ್ತಿದ್ದರು ಎಂದು ಕುಟುಂಬ ಸದಸ್ಯರೊಬ್ಬರು ಹೇಳಿದ್ದಾರೆ.
ಕುಮಾರ್ ಅವರು ಎಸ್ಟೇಟ್ ನ ಅಕೌಂಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇದೀಗ ಕುಮಾರ್ ಅವರ ಮೃತದೇಹವನ್ನು ವಶಕ್ಕೆ ಪಡೆಯಲಾಗಿದ್ದು, ಕೊತಗಿರಿ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಸ್ತುತ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆತ್ಮಹತ್ಯೆ ಹಿಂದಿನ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.