ಆನ್ ಲೈನ್ ರೈಲ್ವೇ ಪರೀಕ್ಷೆಯಿಂದ ಬರೊಬ್ಬರಿ 4 ಲಕ್ಷ ಮರಗಳ ಕೊಡಲಿ ಪೆಟ್ಟಿಗೆ ಬಿತ್ತು ಬ್ರೇಕ್!

ಭಾರತೀಯ ರೈಲ್ವೇ ಇಲಾಖೆಯು ತನಗೆ ಅಗತ್ಯವಿರುವ ಹುದ್ದೆಗಳ ಭರ್ತಿಗೆ ಡಿಜಿಟಲ್​ ಮೊರೆ ಹೋಗಿದ್ದು, ಇಲಾಖೆಯ ಈ ವಿಧಾನದಿಂದಾಗಿ ಬರೊಬ್ಬರಿ 319 ಕೋಟಿ ಕಾಗದದ ಉಳಿತಾಯವಾಗಲಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತೀಯ ರೈಲ್ವೇ ಇಲಾಖೆಯು ತನಗೆ ಅಗತ್ಯವಿರುವ ಹುದ್ದೆಗಳ ಭರ್ತಿಗೆ ಡಿಜಿಟಲ್​ ಮೊರೆ ಹೋಗಿದ್ದು, ಇಲಾಖೆಯ ಈ ವಿಧಾನದಿಂದಾಗಿ ಬರೊಬ್ಬರಿ 319 ಕೋಟಿ ಕಾಗದದ ಉಳಿತಾಯವಾಗಲಿದೆ ಎಂದು  ತಿಳಿದುಬಂದಿದೆ.

ಭಾರತೀಯ ರೈಲ್ವೇ ಇಲಾಖೆ ಈ ಹಿಂದಿನ ಪರೀಕ್ಷಾ ವಿಧಾನಕ್ಕೆ ಬದಲಾಗಿ ಆನ್​ಲೈನ್​ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಅಳವಡಿಸಿಕೊಂಡಿದ್ದು, ಈ ಮೂಲಕ ಕಾಗದದ ಬಳಕೆಯೂ ಕಡಿಮೆಯಾಗಿ ಸುಮಾರು 4 ಲಕ್ಷ  ಮರಗಳಿಗೆ ಬೀಳುತ್ತಿದ್ದ ಕೊಡಲಿ ಪೆಟ್ಟಿಗೆ ಬ್ರೇಕ್ ಬೀಳಲಿದೆ. ಅಂತೆಯೇ ಇಲಾಖೆಯಲ್ಲಿನ ನೇಮಕಾತಿ ಪ್ರಕ್ರಿಯೆಯಲ್ಲಿನ ಭ್ರಷ್ಟಾಚಾರಕ್ಕೂ ಬ್ರೇಕ್ ಬೀಳಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರೈಲ್ವೇ ಇಲಾಖೆಯ ಈ ಕ್ರಮದಿಂದ  ಕಾಗದ ತಯಾರಿಗೆ ಬಳಸಲಾಗುತ್ತಿದ್ದ ಮರಗಳು ಇನ್ನು ಜೀವಂತವಾಗಿರಲಿದ್ದು, ಇದರಿಂದ 4 ಲಕ್ಷ ಮರಗಳು ಹಾಗೂ 319 ಕೋಟಿ ಪೇಪರ್ ಹಾಳೆಗಳು​ ಉಳಿಯಲಿವೆ.

ಸಾಮಾನ್ಯವಾಗಿ ರೈಲ್ವೇ ಇಲಾಖೆಯಲ್ಲಿ ಮೂರು ಹಂತಗಳಲ್ಲಿ ಪರೀಕ್ಷೆ ನಡೆಯುತ್ತದೆ. ಇದರಲ್ಲಿ ಲಿಖಿತ ಹಾಗೂ ಕೌಶಲ್ಯ ಪರೀಕ್ಷೆಗಾಗಿ ಆನ್​ಲೈನ್ ಬಳಕೆ ಮಾಡಿಕೊಂಡಿದೆ. ರೈಲ್ವೇ ಇಲಾಖೆ 351 ಕೇಂದ್ರಗಳಲ್ಲಿ 92 ಲಕ್ಷ ಅಭ್ಯರ್ಥಿಗಳು  ಪರೀಕ್ಷೆ ಬರೆದಿದ್ದರು. ಒಟ್ಟು 14 ಸಾವಿರ ಹುದ್ದೆಗಳ ಭರ್ತಿಗೆ ಈ ಮಾದರಿಯಲ್ಲಿ ಪರೀಕ್ಷೆ ನಡೆಸಲಾಗಿತ್ತು. 92 ಲಕ್ಷ ಮಂದಿಯಲ್ಲಿ 2.73 ಲಕ್ಷ ಅಭ್ಯರ್ಥಿಗಳು ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. ಈ ಎಲ್ಲಾ ಅಭ್ಯರ್ಥಿಗಳನ್ನು  ಆನ್​ ಲೈನ್​ ಮೂಲಕವೇ ಆಯ್ಕೆ ಮಾಡಲಾಗಿದೆ. ಕೊನೇ ಹಂತದಲ್ಲಿ 45 ಸಾವಿರ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದು, ಜೂನ್​ 29, 30 ರಂದು ಪರೀಕ್ಷೆ ಬರೆದಿದ್ದಾರೆ ಎಂದು ರೈಲ್ವೇ ಸಚಿವಾಲಯದ ಹಿರಿಯ ಅಧಿಕಾರಿ ಮಾಹಿತಿ  ನೀಡಿದ್ದಾರೆ.

ಈ ಪ್ರಕ್ರಿಯೆಗೆ ಎರಡು ತಿಂಗಳು ಕಾಲಾವಕಾಶ ತೆಗೆದುಕೊಂಡಿದ್ದು, ಇದು ವಿಶ್ವದಲ್ಲೇ ದೊಡ್ಡ ಆನ್​ ಲೈನ್​ ಪರೀಕ್ಷೆ ಎಂಬ ಖ್ಯಾತಿಗೂ ಪಾತ್ರವಾಗಿದೆ. ಇನ್ನು ಉತ್ತರ ಪ್ರತಿಯನ್ನು ವಾರದೊಳಗೆ ಆನ್​ಲೈನ್​ನಲ್ಲಿ ನೀಡಲಾಗುವುದು ಎಂದು  ರೈಲ್ವೇ ಇಲಾಖೆ ತಿಳಿಸಿದೆ. ಸುಮಾರು 14 ಸಾವಿರ ಅಭ್ಯರ್ಥಿಗಳು ಆಯ್ಕೆಯಾಗಲಿದ್ದು, ಸೆಪ್ಟಂಬರ್​ ತಿಂಗಳಲ್ಲಿ ದಾಖಲೆಗಳ ಪರಿಶೀಲನೆಗೆ ಕರೆಯಲಾಗುವುದು. ದೀಪಾವಳಿ ನಂತರ ಆಯ್ಕೆಯಾದ ಅಭ್ಯರ್ಥಿಗಳು ಕೆಲಸಕ್ಕೆ  ಹಾಜರಾಗಲಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com